Hindu Temple: ಹಿಂದೂ ದೇಗುಲಗಳ ಹಣ ಹಿಂದೂಯೇತರಕ್ಕೆ ಬಳಕೆ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 23: ಕರ್ನಾಟಕ ಸರ್ಕಾರ ಹಿಂದೂ ದೇವಾಲಯಗಳ ಹಣವನ್ನು ಹಿಂದೂಯೇತರ ಸಮುದಾಯಗಳಿಗೆ ಬಳಕೆ ಮಾಡುತ್ತದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು, ಹಿಂದೂಯೇತರ ಸಮುದಾಯಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಮತ್ತು ಹಿಂದೂ ದೇವಸ್ಥಾನಗಳ ಮೇಲೆ ಅನ್ಯಾಯಯುತ ತೆರಿಗೆ ಹಾಕಲಾಗುತ್ತಿದೆ. ಈ ಆರೋಪ ಕರ್ನಾಟಕ ಬಿಜೆಪಿ ನಾಯಕರ ಸಂಪೂರ್ಣ ಕಪೋಲಕಲ್ಪಿತ ಆರೋಪವಾಗಿದೆ. ಅಮಾಯಕ ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಇಂತಹ ಕ್ಷುಲಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.

ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗುವ ಹಣವನ್ನು ಹಿಂದೂ ಧರ್ಮದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟಂತೆ ಮಾತ್ರ ಬಳಸಲಾಗುತ್ತದೆ. ಈ ನಿಧಿಯು 2003ರಲ್ಲಿ ಕಾಯಿದೆಯು ಜಾರಿಗೆ ಬಂದಾಗಿನಿಂದ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಬಳಕೆಯಾಗುತ್ತಿದೆ ಭವಿಷ್ಯದಲ್ಲಿಯೂ ಅದಕ್ಕೆ ಮಾತ್ರವೇ ಬಳಕೆಯಾಗಲಿದೆ.
ಬೇರೆ ಧರ್ಮದವರ ಅನುಕೂಲಕ್ಕೆ ಬಳಕೆ ಇಲ್ಲ
ಬೇರೆ ಯಾವುದೇ ಧರ್ಮದ ಜನರ ಅನುಕೂಲಕ್ಕಾಗಿ ಈ ಹಣವನ್ನು ಬಳಸಲಾಗುವುದಿಲ್ಲ. ದೇವಸ್ಥಾನಗಳ ಹಣವನ್ನು ಕೇವಲ ಹಿಂದೂ ಸಮುದಾಯದ ಏಳಿಗೆ ಮತ್ತು ಕಲ್ಯಾಣಕ್ಕೆ ಮಾತ್ರ ಬಳಸಬೇಕಾದ ಬಾಧ್ಯತೆಯನ್ನು ಈ ನಿಧಿಯ ನಿಬಂಧನೆಗಳಲ್ಲಿ ಒತ್ತಿ ಹೇಳಲಾಗಿದೆ.

ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕವನ್ನು ರಾಜಕೀಯ ಕಾರಣಗಳಿಗಾಗಿ ತಪ್ಪಾಗಿ ಜನತೆಯ ಮುಂದಿಡುವ ಪ್ರಯತ್ನವನ್ನು ಕರ್ನಾಟಕ ಬಿಜೆಪಿ ಮಾಡುತ್ತಿದೆ.
1997ರಲ್ಲಿ ಕಾಯಿದೆಯನ್ನು ಜಾರಿಗೊಳಿಸಿದಾಗಿನಿಂದಲೂ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಸೃಜಿಸಬೇಕು ಎಂಬ ನಿಬಂಧನೆ ಕಾಯಿದೆಯೇ ಅಡಕವಾಗಿದೆ. ಹೀಗಿದ್ದರೂ ಸಾಮಾನ್ಯ ಸಂಗ್ರಹಣಾ ನಿಧಿಯ ನಿಯಮಾವಳಿಗಳಲ್ಲಿ ಅಡಕವಾಗಿರುವ ಅಂಶಗಳಿಗೆ ವಿರುದ್ಧವಾಗಿ ಇಂತಹ ಆಪಾದನೆಗಳನ್ನು ಮಾಡಲಾಗುತ್ತಿದೆ ಎಂದರು.
ಹಿಂದೂಯೇತರ ಸಮುದಾಯಗಳಿಗೆ ಹಿಂದೂ ದೇವಸ್ಥಾನಗಳ ಹಣವನ್ನು ಬಳಸಲಾಗುತ್ತದೆ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ಅನ್ಯಾಯಯುತ ತೆರಿಗೆ ಹಾಕಲಾಗುತ್ತಿದೆ ಎನ್ನುವ @BJP4Karnataka ನಾಯಕರ ಆರೋಪ ಸಂಪೂರ್ಣ ಕಪೋಲಕಲ್ಪಿತವಾಗಿದ್ದು ಅಮಾಯಕ ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ದ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿ ನಾಯಕರು ಇಂತಹ ಕ್ಷುಲಕ ಪ್ರಯತ್ನ… pic.twitter.com/WD2XfpXVxv
— Siddaramaiah (@siddaramaiah) February 22, 2024
ತಿದ್ದುಪಡಿಗೂ ಮೊದಲು ನಿಧಿಗೆ ಹಣ ಬರುವ ವಿವರ
* ನಿವ್ವಳ ಆದಾಯ ಹತ್ತು ಲಕ್ಷ ರೂ. ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ.10 ರಷ್ಟು ಆದಾಯ
* ನಿವ್ವಳ ವಾರ್ಷಿಕ ಆದಾಯ ಐದು ಲಕ್ಷ ರೂ. ಗಿಂತ ಹೆಚ್ಚಿದ್ದು ಹತ್ತು ಲಕ್ಷ ರೂ. ವಾರ್ಷಿಕ ಆದಾಯದಿಂದ ಶೇ.5 ಹಾಗೂ
ರಾಜ್ಯ ಸರ್ಕಾರದಿಂದ ದೊರೆಯುತ್ತಿದ್ದ ಅನುದಾನ.
* ತಿದ್ದುಪಡಿಯ ನಂತರ ಸಾಮಾನ್ಯ ಸಂಗ್ರಹಣಾ ನಿಧಿಗೆ ಹಣವು ಇದೆ ಮೂಲದಿಂದ ಬರಲಿದೆ
* ಒಂದು ಕೋಟಿ ರೂ. ನಿವ್ವಳ ಆದಾಯ ಮೀರಿದ ದೇವಸ್ಥಾನಗಳ ಒಟ್ಟು ವಾರ್ಷಿಕ ಆದಾಯದಿಂದ ಶೇ. 10
* ಹತ್ತು ಲಕ್ಷ ರೂ ನಿವ್ವಳ ಆದಾಯಕ್ಕಿಂತ ಹೆಚ್ಚಿದ್ದು ರೂ. 1 ಕೋಟಿ ಮೀರಿದ ಸಂಸ್ಥೆಗಳಿಂದ ಶೇ.5 ಹಾಗೂ
ರಾಜ್ಯ ಸರ್ಕಾರದಿಂದ ದೊರೆಯುವ ಅನುದಾನವಾಗಿದೆ.
* ನೂತನ ತಿದ್ದುಪಡಿಯನ್ನು ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮಾಡಲಾಗಿದೆ. 3/6
ಕೋಮು ಧ್ರುವೀಕರಣ ಮಾಡಲಾಗುತ್ತಿದೆ
ಚುನಾವಣಾ ದೃಷ್ಟಿಯಿಂದ ಕೇವಲ ಕೋಮು ಧ್ರುವೀಕರಣದತ್ತಲೇ ಗಮನಹರಿಸುತ್ತಿರುವ ಬಿಜೆಪಿಯ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಸಮಾಜದಲ್ಲಿನ ಶಾಂತಿ, ಸಾಮರಸ್ಯವನ್ನು ಕದಡಲು ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ.
ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಅನೈತಿಕ ಹಾದಿ ತುಳಿದಿರುವ ಬಿಜೆಪಿ ನಾಯಕರು ತಮ್ಮ ಸಾರ್ವಜನಿಕ ವರ್ತನೆಗೆ ತಾವೇ ನಾಚಿಕೆಪಡಬೇಕಾಗಿದೆ. ರಾಜ್ಯದ ಸಾಮರಸ್ಯವನ್ನು ಕದಡುವ ದ್ರೋಹದ ಕೆಲಸ ಭಾರತೀಯ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಈ ಸಂಚನ್ನು ಕನ್ನಡಿಗರು ನಿಷ್ಕ್ರಿಯಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.
ಯುವಕರ ಭವಿಷ್ಯದ ಜತೆ ಬಿಜೆಪಿ ಚೆಲ್ಲಾಟ
ಸಮಾಜದಲ್ಲಿ ತಪ್ಪು ಮಾಹಿತಿಯನ್ನು ಹರಡಿ ಜನರನ್ನು ತಪ್ಪು ಹಾದಿಗೆ ಎಳೆಯುವ ಮೂಲಕ ಈ ದೇಶದ ಜನರು ವಿಶೇಷವಾಗಿ ಈ ದೇಶದ ಯುವಕರ ವೃತ್ತಿ, ಭವಿಷ್ಯದೊಂದಿಗೆ ಬಿಜೆಪಿ ನಾಯಕರು ಚೆಲ್ಲಾಟವಾಡುತ್ತಿದ್ದಾರೆ. ಯುವಪೀಳಿಗೆ ತಮ್ಮ ಭವಿಷ್ಯವನ್ನು ಬದಿಗೆ ಸರಿಸಿ ಇಂತಹ ಅವಾಸ್ತವಿಕ, ಕಲ್ಪಿತ ಯುದ್ಧಗಳಲ್ಲಿ ತೊಡಗಿಸಿಕೊಳ್ಳಲು ಇವರು ಪ್ರೇರೇಪಿಸುತ್ತಿದ್ದಾರೆ ಎಂದು ಅವರು ದೂರಿದರು.
ಕೇಂದ್ರ ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದು, ಇದಕ್ಕೆ ನಾಡಿನ ಜನತೆ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಲು ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡುವ ಸಾಮರ್ಥ್ಯ ಹೊಂದಿರಬೇಕು ಎಂಬಂತಹ ಅಸ್ವಸ್ಥ ನಿಲುವಿಗೆ ಬಿಜೆಪಿ ಬಂದಂತಿದೆ.
ಇದೇ ಕಾರಣಕ್ಕಾಗಿ ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಮಾಡಿದಂತೆ ಕಾಣುತ್ತಿದೆ. ಅವರ ಜೊತೆ ಇತರ ನಾಯಕರು ಕೂಡ ಸುಳ್ಳಿನಲ್ಲಿ ಪೈಪೋಟಿ ನೀಡುತ್ತಿರುವಂತೆ ವರ್ತಿಸುತ್ತಿರುವುದು ಕರ್ನಾಟಕದ ದುರಂತವೇ ಸರಿ. ಇಂತಹ ದುಷ್ಟತನದ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವಷ್ಟು ಕನ್ನಡಿಗರು ಪ್ರಬುದ್ಧರಾಗಿದ್ದಾರೆ. ಪ್ರಧಾನಿ ಮೋದಿ ಆಳ್ವಿಕೆಯಲ್ಲಿ ಡಾಲರ್ ಎದುರು ರೂಪಾಯಿ ಕುಸಿಯುತ್ತಿರುವಂತೆ ನಾಯಕನಾಗಿ ವಿಜಯೇಂದ್ರ ಅವರ ವಿಶ್ವಾಸಾರ್ಹತೆ ಕುಸಿಯುತ್ತಿರುವುದು ಸ್ಪಷ್ಟವಾಗಿದೆ ಎಂದು ಅವರು ವಿವರಿಸಿದರು.
ವಿಧೇಯಕಕ್ಕೆ ಮಾಡಿರುವ ತಿದ್ದುಪಡಿ ಏನು?
2011ರ ವಿಧೇಯಕದ ಪ್ರಕಾರ, 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್ ನಿಧಿಗೆ ಸಂಗ್ರಹಿಸುತ್ತಿದ್ದ ನಿಯಮಕ್ಕೆ ತಿದ್ದುಪಡಿ ತಂದು 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್ ನಿಧಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಹಿಂದೆ 25 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ. 5ರಷ್ಟು ಆದಾಯವನ್ನು ಧಾರ್ಮಿಕ ಪರಿಷತ್ ಸಂಗ್ರಹಿಸುತ್ತಿದ್ದರೆ ಈಗ ಒಂದು ಕೋಟಿವರೆಗೆ ಆದಾಯವಿದ್ದರೂ ಶೇ. 5ರಷ್ಟು ಮೊತ್ತವನ್ನು ಮಾತ್ರ ಸರ್ಕಾರಕ್ಕೆ ನೀಡಬೇಕಾಗಿದೆ.












Click it and Unblock the Notifications