ವಿಧಾನಸೌಧ ಪೊಲೀಸರ ಮೆಚ್ಚುಗೆಗೆ ಪಾತ್ರವಾದ ಸಿಎಂ
ಬೆಂಗಳೂರು, ಮೇ 21 : ವಿಧಾನಸೌಧದ ಭದ್ರತೆ ನೋಡಿಕೊಳ್ಳುವ ಪೊಲೀಸ್ ಹರಕಲು ಖುರ್ಚಿಯಲ್ಲಿ ಕುಳಿತಿದ್ದನ್ನು ಕಂಡ ಸಿಎಂ ಸಿದ್ದರಾಮಯ್ಯ ಕೋಪಗೊಂಡ ಘಟನೆ ನಡೆದಿದೆ. ಪೊಲೀಸರಿಗೆ ಉತ್ತಮ ಖುರ್ಚಿಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಪೊಲೀಸರಿಂದ ಮೆಚ್ಚುಗೆ ಪಡೆದರು.
ಬುಧವಾರ ವಿಧಾನಸೌಧದಲ್ಲಿ ಭಯೋತ್ಪಾದನಾ ವಿರೋಧಿ ದಿನದ ಅಂಗವಾಗಿ ಐಕ್ಯತಾ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಮಗಿಸಿ ಸಿಎಂ ಕಾರಿನಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಕಾರಿನಲ್ಲಿ ಬರುತ್ತಿದ್ದಾಗ, ವಿಧಾನಸೌಧದ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರು ಕುಳಿತುಕೊಳ್ಳುವ ಖುರ್ಚಿ ಹರಕು-ಮುರುಕಾಗಿದ್ದನ್ನು ಗಮನಿಸಿದರು.

ತಕ್ಷಣ ಕಾರು ನಿಲ್ಲಿಸಲು ಸೂಚಿಸಿದ ಸಿಎಂ ಸಿದ್ದರಾಮಯ್ಯ ಪೊಲೀಸರು ಏಕೆ? ಹರಕಲು ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರಿಗೆ ಸೂಕ್ತವಾದ ಖುರ್ಚಿ ನೀಡಲು ಸಾಧ್ಯವಿಲ್ಲವೇ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಗತ್ಯ ಸೌಲಭ್ಯವನ್ನು ತಕ್ಷಣ ಒದಗಿಸಬೇಕು ಎಂದು ತಾಕೀತು ಮಾಡಿದರು. [ಪೊಲೀಸರ ವೈಫಲ್ಯವನ್ನು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ]
ಮಳೆ, ಬಿಸಿಲು, ಚಳಿ ಯಾವುದನ್ನೋ ಲೆಕ್ಕಿಸದೆ ಪೊಲೀಸರು ವಿಧಾನಸೌಧದ ಕಾವಲು ಕಾಯುತ್ತಾರೆ. ಅವರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದ ಸಿಎಂ, ಕೂಡಲೇ ಖುರ್ಚಿಗಳನ್ನು ಬದಲಾಯಿಸಿ ಹೊಸ ಖುರ್ಚಿಗಳನ್ನು ನೀಡಿ ಎಂದು ಆದೇಶ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ಕ್ರಮ ಪೊಲೀಸರ ಮೆಚ್ಚುಗೆಗೆ ಪಾತ್ರವಾಯಿತು. ಕಾರಿನಲ್ಲಿ ಹೋಗುತ್ತಿದ್ದ ಸಿಎಂ ನಾವು ಕುಳಿತಿದ್ದ ಖುರ್ಚಿಯನ್ನು ಗಮಸಿಸಿ ಅಗತ್ಯ ಸೌಲಭ್ಯ ಒದಗಿಸುವಂತೆ ಹೇಳಿದರು ಸಿಎಂ ಅವರ ಮಾನವೀಯತೆ ಗುಣ ಇದರಲ್ಲೇ ಗೊತ್ತಾಗುತ್ತಿದೆ ಎಂದು ಸಿದ್ದರಾಮಯ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.












Click it and Unblock the Notifications