CM DK Shivakumar: ಬಾಲಕರ ಹಾಸ್ಟೆಲ್‌ಗೆ ಸಿಎಂ ದಿಢೀರ್ ಭೇಟಿ; ವಿದ್ಯಾರ್ಥಿಗಳ ಜೊತೆ ಊಟ ಮಾಡಿ, ಕುಂದುಕೊರತೆ ಆಲಿಸಿದ ಡಿಕೆಶಿ
ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಹಾಸ್ಟೆಲ್‌ಗೆ ಆಗಮಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಕುಳಿತು ಹಾಸ್ಟೆಲ್ ಊಟವನ್ನ ಸವಿಯುವ ಮೂಲಕ ಅವರ ಕಷ್ಟಸುಖಗಳನ್ನ ಖುದ್ದಾಗಿ ಆಲಿಸಿದರು.
ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಕನಕಪುರಕ್ಕೆ ಆಗಮಿಸಿದ್ದ ಅವರು, ಹಾಸ್ಟೆಲ್ ವ್ಯವಸ್ಥೆಗಳನ್ನ ಪರಿಶೀಲಿಸುವ ಉದ್ದೇಶದಿಂದಲೇ ಒಂದು ದಿನ ಮುಂಚಿತವಾಗಿ ಬಂದಿರುವುದಾಗಿ ತಿಳಿಸಿದರು.

ಹಾಸ್ಟೆಲ್‌ಗೆ ಭೇಟಿ ನೀಡಿದ ತಕ್ಷಣವೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಲ್ಲಿನ ಕೊಠಡಿಗಳು ಹಾಗೂ ಶೌಚಾಲಯಗಳನ್ನ ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಬೆಡ್‌ಶೀಟ್ ಇಲ್ಲದಿರುವುದನ್ನು ಗಮನಿಸಿದ ಅವರು, ತಕ್ಷಣವೇ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕೇವಲ ಮೌಖಿಕವಾಗಿ ಸಮಸ್ಯೆ ಕೇಳುವುದರ ಬದಲು, ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಅವರ ಸಮಸ್ಯೆಗಳೇನು ಎಂಬುದನ್ನು ಖುದ್ದಾಗಿ ಬರೆಸಿಕೊಂಡರು.
ಇಲ್ಲಿ ರಾಜ್ಯದ ವಿವಿಧ ಭಾಗಗಳಾದ ಕಲಬುರ್ಗಿ, ರಾಯಚೂರು, ಬೀದರ್, ಹಾವೇರಿ, ಬೆಂಗಳೂರು ಹಾಗೂ ಬಳ್ಳಾರಿಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರೆಲ್ಲರ ಅಭಿಪ್ರಾಯಗಳನ್ನ ಮುಖ್ಯಮಂತ್ರಿಗಳು ತಾಳ್ಮೆಯಿಂದ ಆಲಿಸಿದರು.
ಬಸ್ ನಿಲುಗಡೆ ಸಮಸ್ಯೆ ಹಾಗೂ ಸಿಇಒ, ಉಪ ಆಯುಕ್ತರೊಂದಿಗೆ ಚರ್ಚೆ
ವಿದ್ಯಾರ್ಥಿ ನಿಲಯದ ಹುಡುಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾದ ಸಾರಿಗೆ ಸಂಪರ್ಕದ ಬಗ್ಗೆಯೂ ಈ ಭೇಟಿಯ ವೇಳೆ ಚರ್ಚೆಯಾಯಿತು. "ನಾವೆಲ್ಲರೂ ಉಚಿತ ಬಸ್ ಪಾಸ್ ಪಡೆದಿದ್ದೇವೆ, ಆದರೆ ಸಾರಿಗೆ ಬಸ್‌ಗಳು ನಮ್ಮ ಹಾಸ್ಟೆಲ್ ಬಳಿ ನಿಲ್ಲಿಸುತ್ತಿಲ್ಲ" ಎಂದು ವಿದ್ಯಾರ್ಥಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ, ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಅಲ್ಲದೆ, ವಿದ್ಯಾರ್ಥಿಗಳು ಬರೆದುಕೊಟ್ಟಿರುವ ಎಲ್ಲಾ ಕುಂದುಕೊರತೆಗಳನ್ನ ಉಪ ಆಯುಕ್ತರು ಹಾಗೂ ಸಿಇಒಗಳಿಗೆ ಕಳುಹಿಸಿ, ಮರುಪರಿಶೀಲನೆ ನಡೆಸಿ ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಬ್ಬದ ವಾತಾವರಣ
ಗೌರಿ-ಗಣೇಶ ಹಬ್ಬದ ಕಾರಣ ಬಹುತೇಕ ವಿದ್ಯಾರ್ಥಿಗಳು ಊರಿಗೆ ಹೋಗಿದ್ದರಿಂದ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯ ಖಾಲಿಯಿತ್ತು. ಹೀಗಾಗಿ ಅಲ್ಲಿಗೆ ಭೇಟಿ ನೀಡಿಲ್ಲ ಎಂದ ಸಿಎಂ, ಪ್ರಸ್ತುತ ತಾವು ಭೇಟಿ ನೀಡಿದ ಹಾಸ್ಟೆಲ್‌ನಲ್ಲಿ ಶೇಕಡಾ 75ರಷ್ಟು ವ್ಯವಸ್ಥೆಗಳು ಉತ್ತಮವಾಗಿವೆ, ಉಳಿದ ಸಣ್ಣಪುಟ್ಟ ಕೊರತೆಗಳನ್ನ ಶೀಘ್ರವೇ ಸರಿಪಡಿಸಲಾಗುವುದು ಎಂದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಬೆರೆತ ಅವರು ಹಾಸ್ಯದ ಚಟಾಕಿಯನ್ನೂ ಹಾರಿಸಿದರು. "ನಿಮ್ಮ ಊರಿನಂತೆ ಇಲ್ಲಿಯೂ ಬಿಸಿಲು ಇದೆಯೇ?" ಎಂದು ಕೇಳಿದಾಗ, ವಿದ್ಯಾರ್ಥಿಯೊಬ್ಬ 'ಮಧ್ಯಾಹ್ನದ ವೇಳೆ ಸ್ವಲ್ಪ ಬಿಸಿಲು ಜಾಸ್ತಿ ಇರುತ್ತದೆ' ಎಂದ. ಅದಕ್ಕೆ ನಕ್ಕ ಸಿಎಂ, "ಹಾಗಾದರೆ ಎಸಿ ಹಾಕಿಸೋಣ" ಎಂದು ತಮಾಷೆ ಮಾಡಿದರು. ಮಳೆ ಇಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದಾಗ, "ಎಲ್ಲರೂ ಸೇರಿ ಮಳೆಗಾಗಿ ಪ್ರಾರ್ಥನೆ ಮಾಡಿ" ಎಂದು ಹೇಳುತ್ತಾ, ನೆರೆದಿದ್ದ ಎಲ್ಲರಿಗೂ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದರು.


Click it and Unblock the Notifications
