ಮೀಸಲಾತಿ ಜಟಾಪಟಿ: ರಣದೀಪ್ ಸುರ್ಜೆವಾಲ ಇತಿಹಾಸ ಓದಿಕೊಳ್ಳಲಿ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು ಮಾರ್ಚ್ 23: ಮೀಸಲಾತಿ ಕುರಿತಂತೆ ಕಾನೂನು ರಚಿಸಿದ್ದು, ಅದನ್ನು ಶೇಡ್ಯೂಲ್ 9ಕ್ಕೆ ಸೇರಿಸುವ ಬದ್ಧ ಸರ್ಕಾರಕ್ಕಿದೆ. ಈ ಬಗ್ಗೆ ಆರೋಪ ಮಾಡಿರುವ ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೀಸಲಾತಿಗೆ ಸಂಬಂಧಿಸಿದಂತೆ ಇತಿಹಾಸವನ್ನು ಓದಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಸಂಬಂಧ ಗುರುವಾರ ಬೆಂಗಳೂರಿನ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಮೀಸಲಾತಿ ಬಗ್ಗೆ ಕಾಂಗ್ರೆಸ್ ಗೆ ಮಾತನಾಡುವ ನೈತಿಕ ಹಾಗೂ ರಾಜಕೀಯ ಅಧಿಕಾರವಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ಮೀಸಲಾತಿಗೆ ಕಾನೂನು ರಚಿಸಿದೆ. ಆ ಪ್ರಕಾರ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸಲು ಸಚಿವ ಸಂಪುಟದ ಅನುಮೋದನೆಯು ಆಗಿದೆ. ಅದನ್ನು ರಾಜ್ಯದ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಕಾನೂನು ಇಲಾಖೆಯ ಸಲಹೆ ಪಡೆದು ಅದರ ಆಧಾರದಲ್ಲಿ ಈ ಪ್ರಕ್ರಿಯೆಯನ್ನು ಜಾರಿಗೊಳಿಸಲು ನಾವು ಸಿದ್ಧರಿದ್ದೇವೆ. ಜೊತೆಗೆ ಶೆಡ್ಯೂಲ್ 9 ಗೆ ಸೇರ್ಪಡೆ ಮಾಡುವ ಬದ್ಧತೆ ಸರ್ಕಾರಕ್ಕಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಣದೀಪ್ ಸುರ್ಜೇವಾಲ ಹೇಳಿದ್ದೇನು?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ರಾಜ್ಯ ಸರ್ಕಾರ ತಂದಿರುವ ಕಾಯ್ದೆಯೇ ಒಂದು ಬೋಗಸ್. ಏಕೆಂದರೆ ಇದಕ್ಕೆ ಕಾನೂನಿನ ರಕ್ಷಣೆ ಸಿಗಬೇಕಾದರೆ ಸಂವಿಧಾನದ ಶೆಡ್ಯೂಲ್ 9 ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹೇಳಿದ್ದರು.
ಇನ್ನೂ 'ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳ' ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದನ್ನು ಶೆಡ್ಯೂಲ್ 9ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆಯೇ ಎಂದು ಸಂಸತ್ತಿನಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಕೇಳಿದರು.

ಮೀಸಲಾತಿ ಪ್ರಸ್ತಾವನೆ: ದಲಿತರಿಗೆ ಬಿಜೆಪಿ ಮಹಾವಂಚನೆ
ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಾಮಾಜಿಕನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಅವರೇ ಅಂತಹ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು. ಬಳಿಕ ಆಗ್ಗೆ ಲೋಕಸಭೆಯಲ್ಲಿ ಲಿಖಿತವಾಗಿಯೂ ಉತ್ತರಿಸಿದರು.
ಕರ್ನಾಟಕದ ರಾಜ್ಯದ ಒಟ್ಟಾರೆ ಮೀಸಲಾತಿ ಪ್ರಮಾಣ ಶೇಕಡಾ 50 ರಿಂದ 56ರಷ್ಟು ಏರಿಕೆ ಮಾಡುವ ಚಿಂತನೆ ಇದೆಯೇ ಎಂಬುದರ ಬಗ್ಗೆಯೂ ಇಲ್ಲ ಎಂದು ಅವರು ಉತ್ತರಿಸಿದ್ದಾರೆ. ಅಂದ ಮೇಲೆ ಪರಿಶಿಷ್ಟ ಜಾರಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರು ಮೀಸಲಾತಿ ಹೆಚ್ಚಳದ ಹೆಸರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕದ ದಲಿತರಿಗೆ ಮಹಾ ವಂಚನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ರಣದೀಪ ಸುರ್ಜೆವಾಲ ಅವರು ಆರೋಪಿಸಿದ್ದರು. ಇದೇ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಸಿದ ಬಸವರಾಜ ಬೊಮ್ಮಾಯಿ ಸರ್ಕಾರ ಎಲ್ಲ ವಿಧದಿಂದಲೂ ಬದ್ಧತೆ ತೋರಿದೆ. ಈಗಾಗಲೇ ಹೆಚ್ಚಳ ಮಾಡಲಾದ ಮೀಸಲಾತಿ ಸಂಬಂಧ ಕಾನೂನು ರಚಿಸಿದ್ದೇವೆ. ಅದನ್ನು ಶೇಡ್ಯೂಲ್ 9ಕ್ಕೆ ಸೇರಿಸುವ, ಅನುಮೋದನೆ ನೀಡಿದ್ದರ ಬಗ್ಗೆ ತಿಳಿಸಿದರು.












Click it and Unblock the Notifications