B Khata To A Khata: ಬಿ-ಖಾತಾದಿಂದ ಎ-ಖಾತಾ ಅರ್ಜಿ ಕುರಿತು ಖಡಕ್ ಸೂಚನೆ ಕೊಟ್ಟ ಮಹೇಶ್ವರ್ ರಾವ್
ಬೆಂಗಳೂರು, ನವೆಂಬರ್ 20: ಜಿಬಿಎ ವ್ಯಾಪ್ತಿಯಲ್ಲಿ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಬಂದಿರುವ ಅರ್ಜಿಗಳನ್ನು ಪಾಲಿಕೆವಾರು ಪರಿಶೀಲಿಸಿ, ನಿಯಮಾನುಸಾರ ಇತ್ಯರ್ಥಪಡಿಸಬೇಕು. ಜೊತೆಗೆ ಇ-ಖಾತಾ ಪಡೆಯಲು ಬಂದಿರುವ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜಿಬಿಎ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಕತ್ತರಿಸುವಿಕೆಗೆ ಮಾರ್ಕ್ಸ್ ತಂತ್ರಾಂಶದ ಮೂಲಕ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಏಕ ಗವಾಕ್ಷಿ ಪದ್ದತಿಯಲ್ಲಿ ಅನುಮತಿ ನೀಡುವಂತೆ ಸೂಚಿಸಿದರು. ಜಿಬಿಎ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಯಾ ನಗರ ಪಾಲಿಕೆಗಳಲ್ಲಿ ಅನಧಿಕೃತವಾಗಿ ರಸ್ತೆ ಕತ್ತರಿಸುವುದು ಕಂಡುಬಂದರೆ ಅವರಿಗೆ ದಂಡ ವಿಧಿಸುವುದರ ಜೊತೆಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಮ್ಮಿಂದಲೇ ಕತ್ತರಿಸಿದ ಭಾಗವನ್ನು ದುರಸ್ತಿಪಡಿಸುವಂತೆ ನಿರ್ದೇಶಿಸಿದರು. 5 ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು, ಪರಿಷ್ಕರಣೆ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ತೆರಿಗೆ ಸಂಗ್ರಹಣೆ ಹೆಚ್ಚಿಸಲು ಸೂಚಿಸಿದರು.
5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅನುಪಯುಕ್ತ ವಾಹನಗಳನ್ನು ಟೋಯಿಂಗ್ ಮಾಡಲು ತಕ್ಷಣ ಟೆಂಡರ್ ಕರೆದು ಯಂತ್ರಗಳನ್ನು ಖರೀದಿಸಿ, ಸಂಚಾರಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ಟೋಯಿಂಗ್ ಮಾಡುವ ವಾಹನಗಳಿಗಾಗಿ ಪಾಲಿಕೆವಾರು ನಿರ್ಧಿಷ್ಟ ಸ್ಥಳ ಗುರಿತಿಸಿ, ಟೋಯಿಂಗ್ ಕಾರ್ಯವನ್ನು ಕೂಡಲೇ ಪ್ರಾರಂಭಿಸಲು ಸೂಚಿಸಿದರು. ನಗರದ 220.68 ಕಿ.ಮೀ ಉದ್ದದ 140 ರಸ್ತೆಗಳಲ್ಲಿ 17 ಪ್ಯಾಕೇಜ್ ಅಡಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 79.08 ಕಿ.ಮೀ ಉದ್ದದ 39 ರಸ್ತೆಗಳ ಕೆಲಸ ಪೂರ್ಣಗೊಂಡಿದೆ. 141.59 ಕಿ.ಮೀ ಉದ್ದದ 101 ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಪ್ರಾರಂಭವಾಗದ ರಸ್ತೆಗಳಲ್ಲಿ ಕೂಡಲೇ ಕಾರ್ಯ ಆರಂಭಿಸುವ ಸಲುವಾಗಿ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಲು ಸೂಚನೆ ನೀಡಿದರು.
ನಗರ ಪಾಲಿಕೆಗಳು ಹಾಗೂ ಜಲ ಮಂಡಳಿಯೊಂದಿಗೆ ಸಮನ್ವಯ ಸಭೆಗಳನ್ನು ನಡೆಸಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಜಲ ಮಂಡಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಮೂಲಕ ಬಗೆಹರಿಸುವಂತೆ ಸೂಚಿಸಿದರು. ನಗರದ ಪ್ರಮುಖ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿನ ಬಹುತೇಕ ಗುಂಡಿಗಳು ಮುಚ್ಚಲಾಗಿದೆ. ಉಳಿದಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಸೂಚನೆ ನೀಡಿದರು. ವಾರ್ಡ್ ಮಟ್ಟದ ರಸ್ತೆಗಳಲ್ಲಿ ಕೂಡ ನಿರಂತರ ಗುಂಡಿ ಮುಚ್ಚುವ ಕಾರ್ಯ ಚಾಲ್ತಿಯಲ್ಲಿರಬೇಕು ಎಂದು ಅವರು ಹೇಳಿದರು.
ಪಣತ್ತೂರು ರಸ್ತೆಯ ದುರಸ್ತಿ ಕೆಲಸ ಪೂರ್ಣಗೊಂಡಿದ್ದು, ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾದಚಾರಿ ಮಾರ್ಗ ಇಲ್ಲದಿದ್ದರೆ ನಾಗರಿಕರು ರಸ್ತೆ ಮೇಲೆಯೇ ಸಂಚರಿಸಬೇಕಾಗುತ್ತದೆ. ಈ ವೇಳೆ ಅಪಘಾತ ಸಂಭವ ಹೆಚ್ಚಾಗುವ ಹಿನ್ನೆಲೆಯಲ್ಲಿ, ಪಾದಚಾರಿ ಮಾರ್ಗ ನಿರ್ಮಾಣವನ್ನು ಕೂಡಲೇ ಕೈಗೊಳ್ಳಬೇಕು ಮತ್ತು ಅಡಚಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ ಅಭಿಯಂತರರು ಮತ್ತು ಗುತ್ತಿಗೆದಾರರಿಗೆ ಕಾಮಗಾರಿ ಅನುಷ್ಠಾನದ ವೇಳೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು, ಇನ್ಫೆಂಟ್ರಿ ರಸ್ತೆಯಲ್ಲಿರುವ ಆಡಳಿತ ಸಂಶೋಧನಾ ಸಂಸ್ಥೆ (ARI)ಯಲ್ಲಿ ನವೆಂಬರ್ 20 ಮತ್ತು 21ರಂದು ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಗಾರ ಆಯೋಜಿಸಲಾಗಿದೆ. ಎಲ್ಲರೂ ಪಾಲ್ಗೊಂಡು, ಕಾರ್ಯಸೂಚಿ ಪ್ರಕಾರ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬೆ.ಘ.ನಿ ನಿಯಮಿತದ ಸಿಇಓ ಕರೀಗೌಡ, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಅಪರ ಆಯುಕ್ತರಾದ ಲತಾ ಆರ್., ಲೋಖಂಡೆ ಸ್ನೇಹಲ್ ಸುಧಾಕರ್, ದಿಗ್ವಿಜಯ್ ಬೋಡ್ಕೆ, ಉಪ ಆಯುಕ್ತರಾದ ಗಾಯತ್ರಿ ನಾಯ್ಕ್, ಮುಖ್ಯ ಅಭಿಯಂತರರು ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications