ಬೆಂಗಳೂರು ಸಂಚಾರ ಸಮಸ್ಯೆ ಬಗೆಹರಿಸಲು ಸಲಹೆ ಕೊಡಿ
ಬೆಂಗಳೂರು, ಸೆ. 18 : ಬೆಂಗಳೂರು ಸಂಚಾರಿ ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹಾಗೂ ಬಾಂಧವ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ 'ನಾಗರಿಕ ಸಂಚಾರ ವೇದಿಕೆ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ನಿವಾರಿಸುತ್ತಾರೆ. ಸಂಚಾರವನ್ನು ಸುಗಮಗೊಳಿಸುವ ಹಾಗೂ ರಸ್ತೆ ಸುರಕ್ಷತೆಯನ್ನು ವೃದ್ಧಿಸುವಂತಹ ಸಲಹೆಗಳನ್ನೂ ಸಾರ್ವಜನಿಕರು ಮುಕ್ತವಾಗಿ ನೀಡಬಹುದಾಗಿದೆ. [ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

'ನಾಗರಿಕ ಸಂಚಾರ ವೇದಿಕೆ'ಯ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಳಗ್ಗೆ 11-30 ರಿಂದ 1-30ರ ತನಕ ಎಲ್ಲಾ 42 ಸಂಚಾರ ಪೊಲೀಸ್ ಠಾಣೆಗಳಲ್ಲಿ ನಡೆಸಲಾಗುತ್ತದೆ. ಸಾರ್ವಜನಿಕರು ನೀಡಿದ ಉತ್ತಮ ಸಲಹೆಗಳನ್ನು ಪರಿಗಣಿಸಿ ಅವುಗಳನ್ನು ನಿಯಮಗಳನ್ನಾಗಿ ಪರಿವರ್ತಿಸಿ ಕಾರ್ಯಗತಗೊಳಿಸಲಾಗುತ್ತದೆ. [ಪ್ರಯಾಣದರ, ಮಾರ್ಗದ ಮಾಹಿತಿ ನೀಡುವ ಆಟೋ ಕೌಂಟರ್]
ಸಾರ್ವಜನಿಕರು ಸಂಚಾರ ಸಮಸ್ಯೆ ಬಗ್ಗೆ ತಮ್ಮ ದೂರು, ಅಹವಾಲುಗಳನ್ನು ಈ ಕಾರ್ಯಕ್ರಮದ ಮೂಲಕ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಹಿಂದಿನ ಪ್ರಕರಣಗಳ ಬಗ್ಗೆ ವಿವರ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.
ಸೆ.19ರ ಶನಿವಾರ ಬೆಳಗ್ಗೆ 11-30 ರಿಂದ 1.30 ರವರೆಗೆ ಬೆಂಗಳೂರು ನಗರದ ಎಲ್ಲಾ 42 ಸಂಚಾರ ಪೊಲೀಸ್ ಠಾಣೆಗಳಲ್ಲಿ 'ನಾಗರಿಕ ಸಂಚಾರ ವೇದಿಕೆ'ಯ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಬೇಖು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications