ಸಾಹಸಿ ಗೇಮ್ ಸಹವಾಸಕ್ಕೆ ಬಿದ್ದು ಮನೆ ತೊರೆಯುವ ಸಾಹಸ ಮಾಡಿದ ಮಿಸ್ಸಿಂಗ್ ಮಕ್ಕಳು!
ಬೆಂಗಳೂರು, ಅ. 02: ಪುಟ್ಟ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ಸ್ವತಂತ್ರವಾಗಿ ಅಲೆಯಲು ಹೋಗುವಂತೆ ನಾಲ್ವರು ಪುಟಾಣಿಳಿಗೆ ಪ್ರೇರಣೆ ನೀಡಿದ್ದು ಸಾಹಸಿ ಗೇಮ್. ಸ್ವತಂತ್ರವಾಗಿರಬೇಕು, ನಮ್ಮನ್ನು ಯಾರೂ ಬಯ್ಯಬಾರದು ಎಂಬ ಕನಸು ಈ ಪುಟ್ಟ ಮನಸುಗಳಲ್ಲಿ ಬೀಳುವಂತೆ ಮಾಡಿದ್ದು ಸಾಹಸಿ ಗೇಮ್. ಗೇಮ್ ನ ಚಟಕ್ಕೆ ಬಿದ್ದು ಮನೆ ಬಿಟ್ಟು ಹೊರಟ ಮಕ್ಕಳ ವಾಸ್ತವಿಕ ಜೀವನವೇ ಬೇರೆಯದ್ದು ಆಗಿತ್ತು. ಅಂತೂ ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ನಾಲ್ವರು ಸಹ ಸಿಕ್ಕಿ ಬಿದ್ದಿದ್ದು, ಅವರು ಮನೆಬಿಟ್ಟು ಹೋಗುವ ಮುನ್ನ ನಡೆಸಿದ್ದ ತಯಾರಿ ಚಿತ್ರಣ ಇಲ್ಲಿದೆ ನೋಡಿ.
ನಾಲ್ವರು ಮಕ್ಕಳು ಮನೆ ಬಿಡಲು ಮೊದಲೇ ಸಿನಿಮಾ ಶೈಲಿಯಲ್ಲಿ ಪ್ಲಾನ್ ರೂಪಿಸಿದ್ದರು. ನಾಲ್ವರೂ ಒಗ್ಗೂಡಿ ಆಟವಾಡಿದರೆ ಪೋಷಕರು ಬಯ್ಯುತ್ತಿದ್ದರು. ಇದರಿಂದ ಮನೆ ಬಿಟ್ಟು ಓಡಿ ಹೋಗಿ ಸ್ವತಂತ್ರವಾಗಿ ಬದುಕುವ ಕನಸು ಕಟ್ಟಿಕೊಂಡಿದ್ದರು. ಅದರಂತೆ ಮನೆ ಬಿಡುವ ತೀರ್ಮಾನ ಮಾಡಿದ ಅಮೃತ ವರ್ಷಿಣಿ, ರಾಯನ್, ಚಿಂತನ್ ಮತ್ತು ಭೂಮಿ ಬಾಣಾವರದಲ್ಲಿದ್ದ ಪ್ಲಾಟ್ ನಿಂದ ಬಟ್ಟೆಯನ್ನು ಸಾಗಿಸಲು ಮೊದಲೇ ಪ್ಲಾನ್ ರೂಪಿಸಿದ್ದಾರೆ. ಪೋಷಕರಿಗೆ ಅರಿವಿಲ್ಲದಂತೆ ನಾಲ್ವರು ಬಟ್ಟೆಯನ್ನು ಮನೆಯಿಂದ ಹೊರಗೆ ಸಾಗಿಸಿದ್ದಾರೆ. ಕ್ರಿಕೆಟ್ ಆಡಲು ಹೋಗುವುದಾಗಿ ಹೇಳಿ ಮೂರು ದಿನದ ಹಿಂದೆ ಬಾಣವಾರ ಬಿಟ್ಟು ತೆರಳಿದ್ದಾರೆ.
ಎಲ್ಲೆಲ್ಲಿ ಹೋಗಿದ್ರು:
ಬಾಣವಾರದಿಂದ ಬೆಂಗಳೂರಿಗೆ ಬಂದಿರುವ ಮಕ್ಕಳು ಪುಟಾಣಿ ಏಜೆಂಟ್ 123 ನಂತೆ ಕಾಡು ಮೇಡು ಸುತ್ತಲು ಹೊರಟಿದ್ದಾರೆ. ಓಡಾಡಲು ಬೇಕಾದಷ್ಟು ಹಣವನ್ನು ನಾಲ್ವರು ಜೋಡಿಸಿಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ್ದಾರೆ. ಬೆಳಗಾವಿಯಿಂದ ಮತ್ತೆ ಬೆಂಗಳೂರು ಬಂದಿದ್ದಾರೆ. ಮೈಸೂರು ಹೀಗೆ ನಾನಾ ಕಡೆ ಸುತ್ತಾಡಿ ಬೆಂಗಳೂರಿಗೆ ಬಂದವರು ವಾಪಸು ಸ್ಲೀಪರ್ ಕೋಚ್ ನಲ್ಲಿ ಮಂಗಳೂರಿಗೆ ತೆರಳಿದ್ದಾರೆ. ಮತ್ತೆ ಮನೆಗೆ ಹೋದರೆ ಪೋಷಕರು ಬಿಡಲ್ಲ ಎಂಬ ಭಯ, ಮನೆ ಬಿಟ್ಟು ಬಂದು ತಪ್ಪು ಮಾಡಿದೆವು ಎಂಬ ಆತಂಕ ಎರಡರ ನಡುವೆಯೇ ಹಲವು ದಿನಗಳನ್ನು ಪುಟಾಣಿ ಮಕ್ಕಳು ಕಳೆದಿರುವುದು ಪೊಲೀಸರಲ್ಲೇ ಅಚ್ಚರಿ ಮೂಡಿಸಿದೆ. ಮಂಗಳೂರಿನ ಪಾಂಡವೇಶ್ವರದಲ್ಲಿ ಇದೀಗ ಪತ್ತೆಯಾಗಿದ್ದು, ಪೋಷಕರ ಮಡಿಲು ಸೇರಲಿದ್ದಾರೆ.
ಗೇಮ್ ನ ಪ್ರಭಾವ:
ಸ್ಥಳೀಯರು ಹೇಳುವ ಪ್ರಕಾರ ನಾಲ್ವರು ಮಕ್ಕಳು ಗೇಮ್ ಆಡಿ ಅದರ ಪ್ರಭಾವಕ್ಕೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಸ್ವತಂತ್ರ್ಯವಾಗಿ ಜೀವನ ಮಾಡುವ ಅಡ್ವಂಚರ್ಸ್ ಗೇಮ್ ಮಕ್ಕಳ ಮನಸಿನ ಮೇಲೆ ಪ್ರಭಾವ ಬೀರಿತ್ತು. ನಾಲ್ವರು ಒಗ್ಗಟ್ಟಾಗಿ ಆಟ ಆಡುತ್ತಿದ್ದ ಸಂಗತಿ ಪೋಷಕರಿಗೆ ಇಷ್ಟವಿರಲಿಲ್ಲ. ಹೀಗಾಗಿ ಪದೇ ಪದೇ ಪೋಷಕರು ಬಯ್ಯುತ್ತಿದ್ದರು. ಈ ಎರಡೂ ವಿಚಾರ ಮಕ್ಕಳ ಮನಸಿನ ಮೇಲೆ ಗಾಢ ಪರಿಣಾಮ ಬೀರಿದ್ದು, ಮನೆ ಬಿಟ್ಟು ಓಡಿ ಹೋಗಿದ್ದಾರೆ. ಮಕ್ಕಳನ್ನು ಪೋಷಕರು ಅತಿ ಸೂಕ್ಷ್ಮವಾಗಿ ನೋಡಿಕೊಳ್ಳುವ ಜತೆಗೆ ಅವರು ಇನ್ನೊಬ್ಬರಿಗೆ ಹೋಲಿಸಿ ನಿಂದನೆ ಮಾಡಬಾರದು ಎಂಬುದಕ್ಕೆ ಈ ಪ್ರಕರಣ ಕೂಡ ಉದಾಹರಣೆ.
ಗೇಮಿಂಗ್ ಬಗ್ಗೆ ಎಚ್ಚರ:
ಇತ್ತೀಚೆಗೆ ಮಕ್ಕಳಲ್ಲಿ ಅಪರಾಧಿಕ ಭಾವನೆ, ಒಂಟಿಯಾಗಿರುವ ಮನೋ ಪ್ರವೃತ್ತಿ ಬೆಳೆಯುತ್ತಿರುವುದೇ ಗೇಮ್ ಗಳ ಮೂಲಕ. ಕೌಶಲ್ಯ ಹೆಚ್ಚಿಸುವ ಬದಲಿಗೆ ಮಕ್ಕಳ ಮನಸಿನ ಮೇಲೆ ಕೆಟ್ಟ ಪರಿಣಾಮ ಬೀರುವ ಗೇಮ್ ಗಳು ಬಂದಿವೆ. ಮಕ್ಕಳು ಕೌಶಲ್ಯ ಅಭಿವೃದ್ದಿ ಪಡಿಸಿಕೊಳ್ಳುವ ಗೇಮ್ ಗಳಿಂದ ತೊಂದರೆ ಇಲ್ಲ. ಆದರೆ, ಈ ರೀತಿಯ ಕೆಟ್ಟ ಪರಿಣಾಮ ಬೀರುವ ಗೇಮ್ ಗಳಿಂದ ಮಕ್ಕಳನ್ನು ದೂರ ಇಟ್ಟು ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ಮನೋತಜ್ಞ ಡಾ. ಶಿವಕುಮಾರ್ ಸಲಹೆ ಮಾಡಿದ್ದಾರೆ.
Recommended Video
ಮಕ್ಕಳು ಸಿಕ್ಕಿದ್ದೇ ಪುಣ್ಯ:
ಬಾಣವಾರದಿಂದ ಕಣ್ಮರೆಯಾಗಿದ್ದ ನಾಲ್ವರು ಮಕ್ಕಳ ಪೋಷಕರು ಸಂತಸಗೊಂಡಿದ್ದಾರೆ. ನಮ್ಮ ಮಕ್ಕಳೂ ನಮಗೆ ಸಿಕ್ಕಿದ್ದೇ ಪುಣ್ಯ. ಮಾಧ್ಯಮ ಹಾಗೂ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇವೆ. ನಾವು ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಮಕ್ಕಳು ಸೇಫ್ ಆಗಿ ಮನೆಗೆ ಬಂದರೆ ಸಾಕು. ನಾವು ಯಾರನ್ನೂ ಬಯ್ಯೋದಿಲ್ಲ. ಎಲ್ಲಾ ಕಡೆ ಮಳೆ ಬೀಳುತ್ತಿರುವುದರಿಂದ ದುರ್ಘಟನೆ ಬಗ್ಗೆ ಭಯವಿತ್ತು. ಇದುವರೆಗೂ ನಮಗೆ ಮಕ್ಕಳ ಸಂಪರ್ಕ ಸಿಕ್ಕಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಮಕ್ಕಳ ಪೋಷಕರು ಇದೀಗ ಮಂಗಳೂರಿನ ಪಾಂಡವೇಶ್ವರ ಠಾಣೆಗೆ ತೆರಳಿದ್ದಾರೆ.