ಬೆಂಗಳೂರಿನಲ್ಲಿ ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿಗೆ ತರಲು ಮುಖ್ಯಮಂತ್ರಿ ಸಲಹೆ
ಬೆಂಗಳೂರು, ಜ. 31: ಜನಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಕೆಲವು ಸಲಹೆ ನೀಡಿದ್ದಾರೆ. ಅದರಂತೆ ಟೋಯಿಂಗ್ ನಲ್ಲಿ ಕೆಲವು ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ತಿಳಿಸಿದ್ದಾರೆ.
ದಿವ್ಯಾಂಗ ಮಹಿಳೆಗೆ ಹಲಸೂರು ಗೇಟ್ ಸಂಚಾರ ಠಾಣೆ ಎಎಸ್ಐ ಹಲ್ಲೆ ನಡೆಸಿದ ಪ್ರಕರಣದ ಬಳಿಕ ಬೆಂಗಳೂರಿನಲ್ಲಿ ಟೋಯಿಂಗ್ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಜೀವನ್ ಭೀಮಾ ನಗರದ ಡೆಲಿವರಿ ಬಾಯ್‌ನ ವಾಹನ ಟೋಯಿಂಗ್ ಮಾಡಿದ್ದು, ಆತ ಟೋಯಿಂಗ್ ವಾಹನದ ಹಿಂದೆ ಓಡಿ ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಎರಡೂ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ವತಃ ಸಭೆ ನಡೆಸಿ ಜನ ಸ್ನೇಹಿ ಟೋಯಿಂಗ್ ವ್ಯವಸ್ಥೆ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೋಯಿಂಗ್ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಸಮಾಲೋಚನೆ ನಡೆಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್ ಆಯುಕ್ತ ಕಮಲಪಂತ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಬಿ.ಆರ್. ನೇತೃತ್ವದಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ಟೋಯಿಂಗ್ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ರಾಂಗ್ ಪಾರ್ಕಿಂಗ್ ಮಾಡುವ ಸಂಬಂಧ ಬೇರೆಯದ್ದೇ ಕ್ರಮ ಜರುಗಿಸುವ ಸಂಬಂಧ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, 'ಟೋಯಿಂಗ್ ವಾಹನ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಪಾರದರ್ಶಕ ದೃಷ್ಟಿಯಿಂದ ಅವರು ಸೂಚಿಸಿದ್ದು, ಅದರಂತೆ ಟೋಯಿಂಗ್ ವಾಹನ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.
ಎರಡು ಘಟನೆ ಬಗ್ಗೆ ರವಿಕಾಂತೆಗೌಡ ಸ್ಪಷ್ಟನೆ:
ಸಾರ್ವನಿಕರಿಂದ ಟೀಕೆ ಬಂದ ಹಿನ್ನೆಲೆಯಲ್ಲಿ ಎರಡು ಟೋಯಿಂಗ್ ಪ್ರಕರಣದ ಬಗ್ಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸಭೆಗೂ ಮುನ್ನ ಸಂಚಾರ ವಿಭಾಗದ ಡಿಸಿಪಿಗಳು, ಇನ್‌ಸ್ಪೆಕ್ಟರ್ ಗಳ ಹಾಗೂ ಎಎಸ್ಐಗಳ ಸಭೆ ನಡೆಸಿದ ರವಿಕಾಂತೇಗೌಡ ಅವರು ಎರಡೂ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಜೀವನ್ ಭೀಮಾನಗರ ಪ್ರಕರಣ:
ಜೀವನ್ ಭೀಮಾನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಡೆಲಿವರಿ ಬಾಯ್ ವಾಹನವನ್ನು ಟೋ ಮಾಡುವ ವಿಡಿಯೋ ಸಂಬಂಧ ಸ್ಪಷ್ಟನೆ ನೀಡಿದ್ದು, ಈ ಘಟನೆ ವಿಡಿಯೋ ಮಾಡಿದ ವ್ಯಕ್ತಿ ಸಂಚಾರ ಪೊಲೀಸರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವಂತೆ ವಿಡಿಯೋ ತಿರುಚಿ ಪೋಸ್ಟ್ ಮಾಡಿದ್ದಾರೆ. ಹರೀಶ್ ಗೌಡ ಗುಂಡಕಲ್ ಎಂಬಾತ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು, ಪ್ರಚೋದನಾತ್ಮಕ ವಿಡಿಯೋ ತಿರುಚಿ ಪೋಸ್ಟ್ ಮಾಡಿದ ಸಂಬಂಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ವಾಸ್ತವದಲ್ಲಿ ಡೆಲಿವರಿ ಬಾಯ್ ಅಬ್ರಹಾಂ ವಾಹನ ಟೋಯಿಂಗ್ ಮಾಡುವ ಮುನ್ನ ವಾಹನ ತೆಗೆಯುವಂತೆ ಎಎಸ್ಐ ಧ್ವನಿವರ್ಧಕದಲ್ಲಿ ಪ್ರಕಟಿಸಿದ್ದಾರೆ. ಆನಂತರ ವಾಹನ ಟೋಯಿಂಗ್ ಮಾಡಿದ್ದು, ವಾಹನ ಮಾಲೀಕ ಅಬ್ರಾಹಂ ತಮ್ಮ ವಾಹನ ಟೋಯಿಂಗ್ ಆಗಿರುವುದು ಗಮನಿಸಿ ಅದರ ಹಿಂದೆ ಓಡಿದ್ದಾರೆ. ಆ ಬಳಿಕ ಯಾವುದೇ ದಂಡ ವಿಧಿಸದೇ ವಾಹನ ಬಿಟ್ಟುಕಳಿಸಲಾಗಿದೆ. ಪ್ರಚೋದನೆ ದುರುದ್ದೇಶದಿಂದ ವಿಡಿಯೋ ತಿರುಚಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹಲಸೂರು ಗೇಟ್ ಸಂಚಾರ ಪೊಲೀಸರ ಪ್ರಕರಣ:
ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ದಿವ್ಯಾಂಗ ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣ ವಿಚಾರಣೆ ನಡೆಸಲಾಗಿದೆ. ಪಾರ್ಕಿಂಗ್ ಸಂಗ್ರಹಿಸುತ್ತಿದ್ದ ಮಹಿಳೆ ಎಎಸ್ಐ ನಾರಾಯಣ್ ಅವರ ಮೇಲೆ ಕಲ್ಲು ತೂರಿದ್ದು, ಎಎಸ್ಐ ಮುಖಕ್ಕೆ ಕಲ್ಲು ಬಿದ್ದು ಗಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಆ ಮಹಿಳೆ ವಿರುದ್ಧ ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಪಾರ್ಕಿಂಗ್ ಹಣ ಕೊಡಲಿಲ್ಲ ಎಂದು ಸಾರ್ವಜನಿಕರ ಮೇಲೆ ಈ ಮಹಿಳೆ ಹಲ್ಲೆ ಮಾಡಿರುವುದು ಕಂಡು ಬಂದಿದ್ದು , ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
Recommended Video
ಮಹಿಳೆ ಮೇಲೆ ಎಎಸ್ಐ ಹಲ್ಲೆ ನಡೆಸಿದ್ದು ಪೊಲೀಸ್ ಅಧಿಕಾರಿಗೆ ತಕ್ಕುದ್ದಲ್ಲ, ಇಲಾಖೆಯ ಗೌರವಕ್ಕೆ ಧಕ್ಕೆ ತರುವ ಅಮಾನವೀಯ ಘಟನೆಯಾಗಿದೆ. ಹೀಗಾಗಿ ಅವರ ವಿರುದ್ಧ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ. ಸಂಚಾರ ಪೊಲೀಸರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ, ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ರವಿಕಾಂತೇಗೌಡ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications