ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಗ್ನಿ ಅವಘಡ: ಹಾರ್ಡ್‌ವೇರ್ ಗೋಡೌನ್ ಭಸ್ಮ
ಬೆಂಗಳೂರು: ನಗರದ ಹೃದಯಭಾಗ ಹಾಗೂ ಅತ್ಯಂತ ಜನನಿಬಿಡ ಪ್ರದೇಶವಾದ ಚಿಕ್ಕಪೇಟೆಯ ಕುಂಬಾರಪೇಟೆ ಬಳಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ಕಟ್ಟಡದಲ್ಲಿದ್ದ ಹಾರ್ಡ್‌ವೇರ್ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಮೂರು ಅಂತಸ್ತಿನ ಕಟ್ಟಡದ ಗೋದಾಮಿನಲ್ಲಿ ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಇತರೆ ಹಾರ್ಡ್‌ವೇರ್ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ತಗುಲಿದ ಕಾರಣ ಇಡೀ ಪ್ರದೇಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತು. ಇದರಿಂದಾಗಿ ಸ್ಥಳೀಯರು ಉಸಿರಾಟದ ತೊಂದರೆ ಅನುಭವಿಸಿದರು ಮತ್ತು ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳ ಮಾಲೀಕರು ಆತಂಕದಿಂದ ಹೊರಗೆ ಓಡಿ ಬಂದರು.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಕಟ್ಟಡವು ಕಿರಿದಾದ ಗಲ್ಲಿಯಲ್ಲಿದ್ದ ಕಾರಣ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಸದ್ಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅಗ್ನಿ ಅವಘಡ: ಹಾರ್ಡ್‌ವೇರ್ ಗೋಡೌನ್ ಭಸ್ಮ... #ChickpetFire #ViralWatch #OIKannada #OIReels #NewsUpdate #BengaluruBlaze #Oneindia pic.twitter.com/DrPcL6LYmm
— oneindiakannada (@OneindiaKannada) February 25, 2026
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಪಕ್ಕದ ಬೀದಿಯಲ್ಲೇ ನಡೆದಿದ್ದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಆ ಭೀಕರ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಅಗ್ನಿ ಅವಘಡ ಸಂಭವಿಸಿರುವುದು ಸ್ಥಳೀಯ ವ್ಯಾಪಾರಿಗಳಲ್ಲಿ ನಡುಕ ಹುಟ್ಟಿಸಿದೆ.
ಕುಂಬಾರಪೇಟೆಯ 3 ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕೆಳಮಹಡಿಯ ಹಾರ್ಡ್‌ವೇರ್ ಅಂಗಡಿಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದು, ಸುಮಾರು 175 ಮಳಿಗೆಗಳ ಭವಿಷ್ಯ ಈಗ ಆತಂಕದಲ್ಲಿದೆ. ಕಟ್ಟಡದಲ್ಲಿದ್ದ ಪ್ಲಾಸ್ಟಿಕ್, ಬಟ್ಟೆ ಹಾಗೂ ಫ್ಯಾನ್ಸಿ ಸಾಮಗ್ರಿಗಳಿಂದಾಗಿ ಬೆಂಕಿ ಕ್ಷಣಾರ್ಧದಲ್ಲಿ ಮೇಲಿನ ಅಂತಸ್ತುಗಳಿಗೆ ಹರಡಿದೆ. ಕಿರಿದಾದ ರಸ್ತೆಗಳ ನಡುವೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಪ್ರದೇಶದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ವಿದ್ಯುತ್ ಕಡಿತ
ಕುಂಬಾರಪೇಟೆಯ ಕಿರಿದಾದ ಗಲ್ಲಿಗಳು ಮತ್ತು ರಸ್ತೆ ಬದಿಯ ಇಕ್ಕಟ್ಟಾದ ಜಾಗದಿಂದಾಗಿ ಬೃಹತ್ ಅಗ್ನಿಶಾಮಕ ವಾಹನಗಳು ಕಟ್ಟಡದ ಹತ್ತಿರ ತಲುಪಲು ಭಾರೀ ಹರಸಾಹಸ ಪಡಬೇಕಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಪ್ರದೇಶದ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.
ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವ್ಯಾಪಾರಿಗಳಿಗೆ ಭಾರೀ ಆರ್ಥಿಕ ಹೊಡೆತ ಬಿದ್ದಿದೆ. ಅಂಗಡಿಗಳಲ್ಲಿದ್ದ ಪೀಠೋಪಕರಣಗಳು, ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳು ಸುಟ್ಟು ಬೂದಿಯಾಗಿವೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಜನದಟ್ಟಣೆಯನ್ನು ನಿಯಂತ್ರಿಸಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆಯು ನಗರದ ಹಳೆಯ ವಾಣಿಜ್ಯ ಪ್ರದೇಶಗಳಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.












Click it and Unblock the Notifications