ಹತ್ತೇ ರೂಪಾಯಿಗೆ ಸಿದ್ದು ಎಲ್ರಿಗೂ ಊಟ ಹಾಕಿಸ್ತಾರಂತೆ!

ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದ ಸಿಎಂ ಸಿದ್ದು ಅವರು ತಡವಾಗಿ ತಮಿಳುನಾಡು ಸಿಎಂ ಜಯಲಲಿತಾರ ಅಮ್ಮಾ ಮೆಸ್ ಮಾದರಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಆದರೆ ಇದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರ ಕನಿಸಿನ ಕೂಸಾಗಿದ್ದು, ಇನ್ನೂ ಸಿಎಂ ಸಿದ್ದು ಅವರ ಕಿವಿಗೆ ಈ ಯೋಜನೆ ಬಿದ್ದಿಲ್ಲ. ಇನ್ನೇನು ಲೋಕಸಭೆ ಚುನಾವಣೆಗೆ ಅಧಿಸೂಚನೆ ಹೊರಬೀಳಲಿದ್ದು, ಆನಂತರ ಯೋಜನೆ ಜಾರಿಗೆ ಅವಕಾಶ ಇರುವುದಿಲ್ಲವೆಂದು ಸಚಿವ ದಿನೇಶ್ ಯೋಜನೆಯನ್ನು ಅನುಷ್ಠಾನಗೊಳಿಸುವ ತರಾತುರಿಯಲ್ಲಿದ್ದಾರೆ.
ಏನಪ್ಪಾ ಇದು 10 ರೂ ಊಟ ಭಾಗ್ಯ ಅಂದ್ರೆ: ಅಗ್ಗದ ದರದಲ್ಲಿ ಜನರಿಗೆ ಊಟ ಕೊಡುವ ಸಲುವಾಗಿ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ ದಿನಾ ಮಧ್ಯಾಹ್ನದ ವೇಳೆಗೆ ಎಲ್ಲರಿಗೂ 10 ರೂ. ಗೆ ಒಂದು ಪ್ಲೇಟ್ ಆರೋಗ್ಯಕರ ಊಟ ದೊರೆಯಲಿದೆ.
ಪ್ರಾಯೋಗಾರ್ಥವಾಗಿ ಯೋಜನೆಯು ಬೆಂಗಳೂರಲ್ಲಿ ಬಿಬಿಎಂಪಿ ಗುರುತಿಸಿದ 200 ಸ್ಥಳಗಳಲ್ಲಿ ಬಿಸಿಯೂಟ ಒದಗಿಸಲು ಯೋಚಿಸಲಾಗಿದೆ. ನಂತರ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು ಹಾಗೂ ಮಂಗಳೂರಲ್ಲಿ ಅನುಷ್ಠಾನಕ್ಕೆ ಬರಲಿದೆ. ಸ್ವ ಸಹಾಯ ಗುಂಪುಗಳು, ಸರಕಾರೇತರ ಸಂಸ್ಥೆಗಳು ಮುಂದೆ ಬಂದಲ್ಲಿ ಬೇರೆ ಕಡೆಗಳಲ್ಲೂ ಯೋಜನೆ ಪ್ರಾರಂಭಕ್ಕೆ ಅನುಮತಿ ಸಿಗಲಿದೆ.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿರುವ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಷನ್ ಮೂಲಸೌಕರ್ಯಗಳನ್ನು ಬಳಸಿಕೊಂಡು ನಗರಪಾಲಿಕೆಯ ಸಹಯೋಗದೊಂದಿಗೆ ಬಡ ಹಾಗೂ ಮಧ್ಯಮವರ್ಗದ ದುಡಿಯವ ವರ್ಗದ ಜನತೆ ಹೆಚ್ಚಿರುವ ಸ್ಥಳಗಳಲ್ಲಿ ಮಾರುಕಟ್ಟೆ ದರಕ್ಕಿಂತ ತುಂಬಾ ಕಡಿಮೆ ದರದಲ್ಲಿ ಊಟ ಒದಗಿಸುವುದು ಸರಕಾರದ ಚಿಂತನೆಯಾಗಿದೆ.
ಇದಕ್ಕಾಗಿ ಆಹಾರ ಇಲಾಖೆಯು ರಿಯಾಯಿತಿ ದರದಲ್ಲಿ ಅಕ್ಷಯಪಾತ್ರೆ ಫೌಂಡೇಷನ್ ಗೆ ಪರಿಕರಗಳನ್ನು ಒದಗಿಸುತ್ತದೆ. ಅವರು ಊಟವನ್ನು ಸಿದ್ದಪಡಿಸಿ BBMP ಸೂಚಿಸುವ ಸ್ಥಳಗಳಲ್ಲಿ ಅವರದೇ ವಾಹನಗಳಲ್ಲಿ ತಂದು ಮಧ್ಯಾಹ್ನದ ಊಟದ ವೇಳೆಗೆ ಬಿಸಿಯೂಟ ಬಡಿಸುತ್ತಾರೆ.
ಈ ಬಗ್ಗೆ ಇಂದು ಶುಕ್ರವಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಇಲಾಖೆಯ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ ಮಾರ್ಚ್ ತಿಂಗಳಿಂದಲೇ ಯೋಜನೆ ಅನುಷ್ಠಾನಕ್ಕೆ ಬರಲಿದೆ.












Click it and Unblock the Notifications