ಹೈಕೋರ್ಟ್ ಮೆಟ್ಟಿಲೇರಿದ ಚಾಮರಾಜಪೇಟೆ ಈದ್ಗಾ ವಿವಾದ: ಅ.25ರಂದು ವಿಚಾರಣೆ
ಬೆಂಗಳೂರು, ಆ.24: ತೀವ್ರ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಈದ್ಗಾ ಮೈದಾನದ ಮಾಲೀಕತ್ವ ವಿಚಾರ ಹೈಕೋರ್ಟ್ ಮೆಟ್ಟಿಲೇರಿದೆ. ರಾಜಕೀಯ ಮತ್ತು ಧಾರ್ಮಿಕ ಸ್ವರೂಪದ ಪಡೆದಿರುವ ಈ ವಿವಾದದ ಬಗ್ಗೆ ಗುರುವಾರದಂದು ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ರಾಜ್ಯ ವಕ್ಫ್ ಮಂಡಳಿ ಚಾಮರಾಜಪೇಟೆಯ ಆಟದ ಮೈದಾನದ ಮಾಲೀಕತ್ವವು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ಆ.6ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅರ್ಜಿದಾರರ ಪರ ವಕೀಲರು, ಬುಧವಾರ ನ್ಯಾ.ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿಯಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯನ್ನು ಪ್ರತಿವಾದಿ ಮಾಡಲಾಗಿದೆ.
ಅರ್ಜಿ ಕುರಿತು ಉತ್ತರಿಸಲು ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಗುರುವಾರ ಮಧ್ಯಾಹ್ನಕ್ಕೆ ನಿಗದಿಪಡಿಸಿದೆ.

ಪ್ರತಿವಾದಿ ಆದೇಶಕ್ಕೆ ಬೆಲೆ ಇಲ್ಲ: ವಕ್ಫ್ ಮಂಡಳಿ, ಮೈದಾನದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯದ ಕುರಿತು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್ ನೇತೃತ್ವದ ಅರೆ ನ್ಯಾಯಿಕ ಮಂಡಳಿಯ ಮುಂದೆ ನಡೆದ ವಿಚಾರಣೆಯಲ್ಲಿ ಬಿಬಿಎಂಪಿ ಸಹ ಪ್ರತಿವಾದಿಯಾಗಿದೆ.
ಪ್ರತಿವಾದಿ ಸ್ಥಾನದಲ್ಲಿರುವ ಸಂಸ್ಥೆಯ ಅಧಿಕಾರಿಯೇ ಪ್ರಕರಣದ ಕುರಿತು ಆದೇಶ ಹೊರಡಿಸಲು ಅವಕಾಶವಿಲ್ಲ ಎಂದು ಹೇಳಿದೆ.
ಅಲ್ಲದೆ, ಜಂಟಿ ಆಯುಕ್ತರಿಗೆ ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ ಎಂದು ವಕ್ಫ್ ಮಂಡಳಿ ಆಕ್ಷೇಪ ಎತ್ತಿದೆ.
ಏನಿದು ವಿವಾದ: ಚಾಮರಾಜಪೇಟೆಯ ಆಟದ ಮೈದಾನ (2.5 ಎಕರೆ) ಆಸ್ತಿಯನ್ನು ಖಾತೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ವಕ್ಫ್ ಮಂಡಳಿ ಕಳೆದ ಜೂ. 21ರಂದು ಪಾಲಿಕೆಗೆ ಅರ್ಜಿ ಸಲ್ಲಿಸಲಾಗಿತ್ತು.

ಬಳಿಕ ಬಿಬಿಎಂಪಿ ಪಶ್ಚಿಮ ವಲಯದ ಕಂದಾಯ ಅಧಿಕಾರಿಗಳು ವಕ್ಫ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿ ಮಾಲೀಕತ್ವದ ದೃಢಪಡಿಸುವ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಅಂತಿಮವಾಗಿ ಕಳೆದ ಆ.3 ರಂದು ಪಶ್ಚಿಮ ವಲಯ ಜಂಟಿ ಆಯುಕ್ತರ ಅರೆ ನ್ಯಾಯಿಕ ಮಂಡಳಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮಾಲೀಕತ್ವ ಸಾಬೀತು ಪಡಿಸುವ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದ ತಿಳಿಸಿದ್ದ ಜಂಟಿ ಆಯುಕ್ತರು ಅರ್ಜಿ ವಜಾಗೊಳಿಸಿ ಆ.6ರಂದು ಆದೇಶಿಸಿದ್ದರು.
ಇದೇ ವೇಳೆ ವಕ್ಫ್ ಮಂಡಳಿಯು ಚಾಮರಾಜಪೇಟೆ ಆಟದ ಮೈದಾನದ ಮೇಲೆ ಹಕ್ಕು ಸ್ಥಾಪಿಸಬೇಕಾದ್ದಲ್ಲಿ ಮುಕ್ತವಾಗಿ ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಬಹುದಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.
ಚಾಮರಾಜಪೇಟೆ ಈದ್ಗಾ ಮೈದಾನ
ಚಾಮರಾಜಪೇಟೆ ಮೈದಾನ ದಿನದಿಂದ ದಿನಕ್ಕೆ ಗೊಂದಲ ಹೆಚ್ಚಾಗುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತದೆ ಅಂತಿದ್ದರೇ ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಸರಣಿ ಡೆಡ್ ಲೈನ್ ಕೊಟ್ಟಿದ್ದು, ಅನುಮತಿ ಸಿಗದಿದ್ದರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ.
ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ಗಣೇಶೋತ್ಸವಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗದಿನಾಚರಣೆಗೂ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದೆ.
ಬಿಬಿಎಂಪಿ ಚಾಮರಾಜಪೇಟೆಯ ಮೈದಾನವನ್ನು ತನ್ನದೆನ್ನುತ್ತಿದೆ. ತನ್ನ ಸುಪರ್ದಿಯಲ್ಲಿದೆ ಎನ್ನುತ್ತಿದೆ. ಆದರೆ ಬಿಬಿಎಂಪಿ ಬಳಿಯಲ್ಲಿ ಇರಬೇಕಿದ್ದ ಅಗತ್ಯ ದಾಖಲೆಪತ್ರಗಳು ಸಿಗುತ್ತಿಲ್ಲ. ಬಿಬಿಎಂಪಿ ತನ್ನ ಬಳಿಯಲ್ಲಿರಬೇಕಿದ್ದ ದಾಖಲೆಗಳನ್ನು ಹುಡುಕಾಡುತ್ತಿದೆ. ಇದರಿಂದ ಚಾಮರಾಜಪೇಟೆಯ ನಿಜವಾದ ಮಾಲೀಕರು ಯಾರು? ಎಂಬುದರ ಬಗ್ಗೆ ಅನುಮಾನಗಳು ಮೂಡುತ್ತಿದೆ.












Click it and Unblock the Notifications