ಐಟಿ ಇಲಾಖೆಗೆ ಪತ್ರ, ಪೆನ್‌ಡ್ರೈವ್ ರವಾನಿಸಿದ ಚೈತ್ರಾ ಕುಂದಾಪುರ- ಅದರಲ್ಲಿರುವ ಸ್ಪೋಟಕ ಮಾಹಿತಿ ಏನು? ಯಾರ ಹೆಸರು ಬಹಿರಂಗ?
ಬೆಂಗಳೂರು, ಸೆಪ್ಟೆಂಬರ್ 18: ಹಿಂದೂಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಹೊಸದೊಂದು ತಿರುವ ಸಿಕ್ಕಿದೆ. ಟಿಕೆಟ್‌ಗಾಗಿ ಹಣ ವಂಚನೆ ಪ್ರಕರಣ ಹೊರಬರುವ ಕೆಲ ತಿಂಗಳಿಗೂ ಮುನ್ನ ಗೋವಿಂದ ಬಾಬು ಪೂಜಾರಿ ( ಟಿಕೆಟ್‌ಗಾಗಿ ದುಡ್ಡು ನೀಡಿರುವ ವ್ಯಕ್ತಿ ) ಅವ್ಯವಹಾರ ನಡೆಸಿದ್ದರು. ಈ ಕುರಿತು ತನಿಖೆ ನಡೆಸಬೇಕೆಂದು ಆದಾಯ ತೆರಿಗೆ ಇಲಾಖೆಗೆ ಚೈತ್ರಾ ಕುಂದಾಪುರ ಪತ್ರ ಬರೆದಿದ್ದಾರೆ.
ಇದಕ್ಕೆ ಸಂಬಂಧಿಸಿರುವ ವಿವಿಧ ಕರೆಗಳ ರೆಕಾರ್ಡಿಂಗ್‌ಗಳನ್ನು ಚೈತ್ರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪುರಾವೆಯಾಗಿ ಪೆನ್ ಡ್ರೈವ್‌ವೊಂದನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಸ್ತುತ ಸಿಟಿ ಕ್ರೈಂ ಬ್ರಾಂಚ್ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ ಅವರು ಪೂಜಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಐಟಿ ತನಿಖೆಗೆ ಕೋರಿದ್ದಾರೆ ಎನ್ನಲಾಗಿದೆ.
ಪೂಜಾರಿಯವರ ನಿಕಟವರ್ತಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೆ. ಹಣ ನೀಡಿ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿರುವುದನ್ನು ಬಹಿರಂಗಪಡಿಸಲು ನಾನು ಬಯಸಿದ್ದೆ ಎಂದು ಚೈತ್ರಾ ಹೇಳಿಕೊಂಡಿದ್ದಾರೆ.

ಪೂಜಾರಿ ಅವರ ಆಪ್ತ ಸಹಾಯಕ ಪ್ರಸಾದ್ ಜತೆ ಸಂಪರ್ಕದಲ್ಲಿದ್ದು, ಹಣದ ವ್ಯವಹಾರದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೆ. ಆದರೆ, ಹಣದ ವ್ಯವಹಾರದ ಯಾವುದೇ ವಿವರಗಳನ್ನು ಪಡೆಯಲು ಸಾಧ್ಯವಾಗದ ಕಾರಣ ನಾನು ಮೌನವಾಗಿದ್ದೇನೆ ಎಂದು ಚೈತ್ರಾ ಅವರು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ವರ್ಷ ಮೇ 11 ರಂದು ಪೂಜಾರಿ ಸ್ವತಃ ಕರೆ ಮಾಡಿ ಹಣದ ಬಗ್ಗೆ ಮಾತನಾಡಿದ್ದರು ಎಂದು ಚೈತ್ರಾ ತಿಳಿಸಿದ್ದಾರೆ.
ಪೂಜಾರಿ ಅವರು ತಮ್ಮ ಮೊಬೈಲ್‌ನಿಂದ ನನಗೆ ಕರೆ ಮಾಡಿದ್ದರು. ಮಂಜುನಾಥ್ ಎಂಬುವವರಿಗೆ 1 ಕೋಟಿ, ಅಭಿನವ ಹಾಲಶ್ರೀ ಸ್ವಾಮೀಜಿಗೆ 1.5 ಕೋಟಿ ಮತ್ತು ವಿಶ್ವನಾಥ್‌ಗೆ 3 ಕೋಟಿ ನೀಡಿರುವುದಾಗಿ ತಿಳಿಸಿದ್ದರು ಎಂದು ಚೈತ್ರಾ ಪತ್ರದಲ್ಲಿ ಹೇಳಿದ್ದಾರೆ.
ಕರೆ ರೆಕಾರ್ಡಿಂಗ್‌ಗಳ ಆಧಾರದ ಮೇಲೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರೆ ಕ್ರಮ ಕೈಗೊಳ್ಳುವಂತೆ ಚೈತ್ರಾ ಒತ್ತಾಯಿಸಿದ್ದಾರೆ.
ಗೋವಿಂದ್ ಬಾಬು ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಚೈತ್ರಾ ಮತ್ತಿತರರು ಐದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಪೂಜಾರಿ ದೂರಿನಲ್ಲಿ ಆರೋಪಿಸಿದ್ದಾರೆ.
ಉಡುಪಿ ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಚೈತ್ರಾ, ಚಿಕ್ಕಮಗಳೂರಿನಲ್ಲಿ ಐವರು ಹಾಗೂ ಯಶವಂತಪುರದಲ್ಲಿ ಒಬ್ಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಕಚೇರಿಯಲ್ಲಿ ವಿಚಾರಣೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ.












Click it and Unblock the Notifications