Second Airport: ತಮಿಳುನಾಡು ಹೊಸೂರು ಬಳಿ ಏರ್‌ಪೋರ್ಟ್ ನಿರ್ಮಾಣದಿಂದ ಹಿಂದೆ ಸರಿಯಿತಾ? ವರದಿ
ಬೆಂಗಳೂರು, ಆಗಸ್ಟ್ 05: ರಾಜಧಾನಿ ಬೆಂಗಳೂರಿನಲ್ಲಿ ಹಾಟ್ ಟಾಪಿಕ್ ಆಗಿರುವ ಹಾಗೂ ನಗರಕ್ಕೆ ಅತ್ಯಗತ್ಯವಾಗಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ (Second Airport) ಸುದ್ದಿ ಭಾರೀ ಸುದ್ದು ಮಾಡುತ್ತಿದೆ. ಈ ಮಧ್ಯೆ ತರಾತುರಿಯಲ್ಲಿ ಹೊಸೂರು ಬಳಿ ವಿಮಾನ ನಿಲ್ದಾಣ ಬಗ್ಗೆ ತಮಿಳುನಾಡು ಮಾಡಿದ್ದ ಘೋಷಣೆ ಘೋಷಣೆಯಾಗಿಯೇ ಉಳಿಯುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.
ಏಕೆಂದರೆ ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಘೋಷಣೆ ಬೆನ್ನಲ್ಲೆ ತಾನು ಸಹ ಹೊಸೂರಿನಲ್ಲಿ 2000 ಎಕರೆ ಪ್ರದೇಶದಲ್ಲಿ ಗ್ರೀನ್ ಫಿಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಘೋಷಣೆ ಮಾಡಿತು.

ವಿಶೇಷವೆಂದರೆ ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸೇರಿದಂತೆ ಕೇಂದ್ರ ಸರ್ಕಾರ ಈ ಬಗ್ಗೆ ಪ್ರಸ್ತಾವನೆಯೇ ಬಂದಿಲ್ಲ ಎಂದು ಹೇಳಿದೆ. ಇದನ್ನು ನೋಡಿದರೆ ತಮಿಳುನಾಡು ಈ ಬಗ್ಗೆ ಗಂಭೀರ ಚಿಂತನೆ ಮಾಡಿದೆಯೋ? ಅಥವಾ ಕರ್ನಾಟಕಕ್ಕೆ ಕಾವೇರಿ, ಮೇಕೆದಾಟು ಯೋಜನೆಯಂತೆ ಇದಕ್ಕೂ ಖ್ಯಾತೆ ತೆಗೆಯಲು ಹೀಗೆ ಹೇಳಿತೋ ಎಂಬ ಅನುಮಾನ ಮೂಡಿದೆ.
ನಿರ್ಮಿಸುವುದು ಸೂಕ್ತವೇ ಆಗಿದ್ದರೆ ತಮಿಳುನಾಡು ಈ ಕುರಿತು ಸರ್ಕಾರದ ಮಟ್ಟದಲ್ಲಿ, ಕೇಂದ್ರದ ಮಟ್ಟದಲ್ಲಿ ಪ್ರಸ್ತಾವನೆ, ಇಲ್ಲವೇ ಡಿಪಿಆರ್, ಜಾಗ ಗುರುತಿಸುವಿಕೆಯಂತ ಪ್ರಕ್ರಿಯೆಗಳನ್ನು ನಡೆಸಬೇಕು. ಸದ್ಯದ ಮಾಹಿತಿ ಪ್ರಕಾರ ತಮಿಳುನಾಡು ಸರ್ಕಾರ ಘೋಷಣೆ ಬಳಿಕ ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ತಮಿಳುನಾಡಿನಿಂದ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಇತ್ತೀಚೆಗೆ ಸಂಸತ್‌ನಲ್ಲಿ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾದ ಮುರಳೀಧರ್ ಅವರು ಮಾಹಿತಿ ನೀಡಿದ್ದಾರೆ.

ತಮಿಳುನಾಡು ಸರ್ಕಾರ ಹೇಳಿದ್ದೇನು?
ಬೆಂಗಳೂರಿಗೆ ಹತ್ತಿರವಿರುವ ತಮಿಳುನಾಡು ರಾಜ್ಯದ ಹೊಸೂರು ವ್ಯಾಪ್ತಿ ಬೃಹತ್ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲಿದ್ದೇವೆ. ಇದರಿಂದ ಈ ಭಾಗದಲ್ಲಿನ ಕೈಗಾರಿಕೆಗಳ ಸಾರಿಗೆ ಸೇವೆಯ ಅಗತ್ಯತೆ ಪೂರೈಸಬಹುದಾಗಿದೆ. ವಾರ್ಷಿಕ ಮೂರು ಕೋಟಿ ಪ್ರಯಾಣಿಕರನ್ನು ನಾವು ನಿರ್ವಹಿಸಲಿದ್ದೇವೆ ಎಂದು ಹೊಸ ಏರ್‌ಪೋರ್ಟ್ ಬಗ್ಗೆ ಘೋಷಿಸಿದ್ದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ತಿಳಿಸಿದ್ದರು.
ಕರ್ನಾಟಕ ಸರ್ಕಾರದ ನಿರ್ಧಾರವೇನು?
ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಹಾಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಇಎ)ದಲ್ಲಿ ವಾರ್ಷಿಕವಾಗಿ ಶೇ.10 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಒಪ್ಪಂದವು 2033ರ ಹೊತ್ತಿಗೆ ಬೆಂಗಳೂರಿಗೆ ಹತ್ತಿರದಲ್ಲಿ ಮತ್ತೊಂದು ಹೊಸ ವಿಮಾನ ನಿಲ್ದಾಣ ನಿರ್ಮಿಸಬೇಕಾದ ಅನಿವಾರ್ಯತೆಯು ಇದೆ ಎಂದು ಸರ್ಕಾರ ಮನಗಂಡಿದೆ. ಹೀಗಾಗಿಯೇ ಐದಾರು ಕಡೆಗಳಲ್ಲಿ 2000 ಎಕರೆ ಜಾಗ ಅಂತಿಮವಾಗಬೇಕಿದೆ. ವಿಸ್ತೃತ ಯೋಜನಾ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ. ಈ ಬಗ್ಗೆ ಇನ್ನೋಂದಿಷ್ಟು ಸಭೆಗಳು ನಡೆಯಲಿವೆ.
ಇದರ ಬೆನ್ನಲ್ಲೆ ಕರ್ನಾಟಕ ಸರ್ಕಾರ ಸೋಮವಾರ ಮಹತ್ವದ ಸಭೆ ನಡೆಸಿತು. ಬೆಂಗಳೂರಲ್ಲಿ ಎರಡನೇ ವಿಮಾನ ನಿಲ್ದಾಣಕ್ಕಾಗಿ ಏಳು ಜಾಗ ಗುರುತಿಸಿದೆ. ಈ ಪೈಕಿ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿ ಇಂದು ಮಂಗಳವಾರ ಇಲ್ಲವೇ ನಾಳೆ ಬುಧವಾರ ಒಂದು ಜಾಗ ಅಂತಿಮಗೊಳಿಸಿ, ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ಹಾಗೂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.












Click it and Unblock the Notifications