ಸಿಸಿಬಿ ಪೊಲೀಸರಿಂದ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 11 : ಬೆಂಗಳೂರು ನಗರದಲ್ಲಿನ ಡ್ರಗ್ಸ್ ಜಾಲದ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪ್ರತೀಕ್ ಶೆಟ್ಟಿ ಬಂಧಿಸಿದ್ದಾರೆ. ಕಾಟನ್ ಪೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.
ಸಿಸಿಬಿ ಪೊಲೀಸರು ಶುಕ್ರವಾರ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧಿಸಿದ್ದಾರೆ. "ಕಾಟನ್ ಪೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತೀಕ್ ಶೆಟ್ಟಿ ಬಂಧಿಸಲಾಗಿದೆ" ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
2018ರಲ್ಲಿಯೂ ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬಂಧಿಸಿದ್ದರು. ಆದರೆ, ಆಗ ಕಾರ್ತಿಕ್ ರಾಜ್ ಜೊತೆ ಇರುವ ನಂಟಿನ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಕಾರ್ತಿಕ್ ರಾಜ್ ಈಗ ಸಿಸಿಬಿ ಪೊಲೀಸರ ವಶದಲ್ಲಿದ್ದಾನೆ. ವಿಚಾರಣೆ ವೇಳೆ ಪಡೆದ ಮಾಹಿತಿ ಅನ್ವಯ ಪ್ರತೀಕ್ ಶೆಟ್ಟಿ ಬಂಧಿಸಲಾಗಿದೆ.

ಸೆಲೆಬ್ರಿಟಿಗಳು ಹೋಗುವ ಪಾರ್ಟಿಗಳಿಗೆ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂಬ ಆರೋಪವಿದೆ. ಈಗ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರು ಪಾರ್ಟಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ.
ದೆಹಲಿಯಲ್ಲಿ ಬಂಧಿಸಿರುವ ವಿರೇನ್ ಖನ್ನಾ ಸಹ ಸೆಲೆಬ್ರಿಟಿಗಳ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಈ ಪಾರ್ಟಿಗಳಿಗೆ ಮಾದಕ ದ್ರವ್ಯ ಪೂರೈಕೆ ಆಗುತ್ತಿತ್ತು. ವಿರೇನ್ ಖನ್ನಾ ಸಹ ಸಿಸಿಬಿ ಪೊಲೀಸರ ವಶದಲ್ಲಿಯೇ ಇದ್ದಾನೆ.
"ಪ್ರತೀಕ್ ಶೆಟ್ಟಿ ಮತ್ತು ಗ್ಯಾಂಗ್ ಇಂದಿರಾ ನಗರ, ಎಂ. ಜಿ. ರೋಡ್‌ಗಳಲ್ಲಿನ ಪಬ್‌ಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಆದರೆ, ಅದನ್ನು ಸಾಬೀತು ಮಾಡಲು ನಮಗೆ ಸೂಕ್ತ ಸಾಕ್ಷ್ಯ ಲಭ್ಯವಾಗಿರಲಿಲ್ಲ" ಎಂದು ಸಿಸಿಬಿ ಜಂಟಿ ಆಯುಕ್ತರಾಗಿದ್ದ ಆಲೋಕ್ ಕುಮಾರ್ ಕಳೆದ ವಾರ ಹೇಳಿದ್ದರು.
ನ್ಯಾಯಾಲಯಕ್ಕೆ ಹಾಜರು : ನಟಿ ರಾಗಿಣಿ ಸೇರಿದಂತೆ ಸಿಸಿಬಿ ಪೊಲೀಸರ ವಶದಲ್ಲಿರುವ 6 ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.












Click it and Unblock the Notifications