Breaking: ಡಿಕೆ ಶಿವಕುಮಾರ್ ಕನಕಪುರ ಆಸ್ತಿಗಳ ಮೇಲೆ ಸಿಬಿಐ ದಾಳಿ
ಬೆಂಗಳೂರು, ಸೆ.28: ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದ ಮನೆ ಮತ್ತು ಇತರ ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕನಕಪುರ, ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರರ ಸ್ಥಳಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಸಿಬಿಐ , ಡಿಕೆ ಶಿವಕುಮಾರ್ ವಿರುದ್ಧ ಇರುವ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಕನಕಪುರ ತಹಶೀಲ್ದಾರ್ ವಿಶ್ವನಾಥ್ ಹಾಗೂ ಪೋಲೀಸರ ಜತೆಗೆ ತೆರಳಿದ್ದ ಕೇಂದ್ರ ತನಿಖಾ ದಳದ ಅಧಿಕಾರಿಗಳು, ಕೆಲವು ದಾಖಲೆಗಳನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.
ಸಿಬಿಐ ಡಿಕೆ ಶಿವಕುಮಾರ್ ವಿರುದ್ಧ ಇರುವ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ನಡೆಸುತ್ತಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನು ಕೇಳಿರುವ ಸಿಬಿಐ, ಡಿಕೆ ಶಿವಕುಮಾರ್ ಅವರ ಸಂಬಂಧಿಕರ ಆಸ್ತಿ ಕುರಿತು ವಿಚಾರಣೆ ನಡೆಸಿದೆ.
ಕನಕಪುರದಲ್ಲಿರುವ ಡಿಕೆ ಶಿವಕುಮಾರ್ ಅವರ ಸಂಬಂಧಿಕರ ಆಸ್ತಿ ವಿವರಗಳ ಮಾಹಿತಿಯನ್ನು ಸಿಬಿಐ ಪಡೆದುಕೊಂಡಿದೆ. ತನಿಖಾ ತಂಡದ ಅಧಿಕಾರಿಗಳು ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸಿಬಿಐ ದಾಳಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, "ಈಗ ತಾನೇ ನನಗೆ ವಿಷಯ ತಿಳಿದಿದೆ. ಮನೆಯಿಂದ ದಾಳಿ ಬಗ್ಗೆ ಫೋನ್ ಬಂದಿದೆ. ಸಿಬಿಐ ಅಧಿಕಾರಿಗಳು ತಹಶೀಲ್ದಾರ್ ಅವರನ್ನು ಜೊತೆ ಕರೆದುಕೊಂಡು ಬಂದು, ನಮ್ಮ ಊರಿನ ಆಸ್ತಿ ಪರಿಶೀಲನೆ ಮಾಡುತ್ತಿದ್ದಾರೆ. ಅವರು ಕೇಳಿದ ದಾಖಲೆ ನೀಡಿದ್ದೇನೆ. ಇವತ್ತೇಲ್ಲ ನಮ್ಮ ತೋಟದ ಮನೆ, ಊರಿನ ಮನೆಗೆ ಬಂದು ಎಲ್ಲಾ ಆಸ್ತಿಗಳನ್ನು ನೋಡಿದ್ದಾರೆ ಅಂತ ಸಿಬ್ಬಂದಿ ತಿಳಿಸಿದ್ದಾರೆ. ಇಷ್ಟು ಮಾತ್ರ ನಂಗೆ ಗೊತ್ತು" ಎಂದರು.
ಭಾರತ್ ಜೋಡೋ ಯಾತ್ರೆ ಹೊತ್ತಲ್ಲೇ ಈ ದಾಳಿ ನಡೆದಿರುವ ಕುರಿತು ಮಾತನಾಡಿದ ಅವರು, "ಏನು ಮಾಡೋಕೆ ಆಗುತ್ತೆ..ಇದು ಹಣೆಬರಹ. ಇದು ಟಾರ್ಗೆಟ್ ಅಂತ ನಾನು ಹೇಳುವುದಿಲ್ಲ. ಅವರು ನನ್ನ ಪ್ರೀತಿ ಮಾಡ್ತಿದ್ದಾರೆ" ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಇಡಿ ವಿಚಾರಣೆಗೆ ಹಾಜರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಿಬಿಐ ಶಾಕ್ ನೀಡಿದೆ.












Click it and Unblock the Notifications