ಕ್ರಿಮಿನಲ್‌ನನ್ನು ನಿಮ್ಮ ಮನೆಯಲ್ಲೆ ಅಡಗಿಸಿಟ್ಟಿದ್ದೀರಾ..?; ಗೃಹ ಸಚಿವ ಆರಗ ಜ್ಞಾನೇಂದ್ರಗೆ ಜೆಡಿಎಸ್ ಪ್ರಶ್ನೆ
ಬೆಂಗಳೂರು, ಏಪ್ರಿಲ್. 04: ಉತ್ತರ ಭಾರತದಿಂದ ಕೇಳಿ ಬರುತ್ತಿದ್ದ ಗೋರಕ್ಷಕರಿಂದ ಕೊಲೆ ಎನ್ನುವ ಸುದ್ದಿಗಳು ರಾಜ್ಯದಲ್ಲೂ ವರದಿಯಾಗಲು ಆರಂಭಿಸಿದೆ. ಇದಕ್ಕೆ ಮುನ್ನುಡಿಯಾಗಿ ರಾಮನಗರ ಜಿಲ್ಲೆಯ ಸಾತನೂರಿನಲ್ಲಿ ನಡೆದ ಇದ್ರೀಸ್ ಪಾಷಾ ಘಟನೆ ಸಾಕ್ಷಿಯಾಗಿದೆ. ಆದರೆ, ದುರಂತ ನಡೆದು, ದೂರು ದಾಖಲಾಗಿ ನಾಲ್ಕು ದಿನಗಳಾಗುತ್ತಾ ಬಂದರೂ ಆರೋಪಿಯನ್ನು ಬಂಧಿಸಿಲ್ಲ.
ಇದ್ರೀಸ್ ಪಾಷಾ ಹತ್ಯೆ ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ ಎಂದು ರಾಮನಗರ ಪೋಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ, ಆತ ಮಾತ್ರ ಫೇಸ್‌ಬುಕ್ ಮೂಲಕ ಲೈವ್ ಬಂದು ಘಟನೆಯ ಬಗ್ಗೆ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಬೆದರಿಕೆ ಹಾಕುತ್ತಿದ್ದಾನೆ.

ಈ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜ್ಯ ಬಿಜೆಪಿ ಸರ್ಕಾರ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿವೆ. ಜಾತ್ಯಾತೀತ ಜನತಾದಳ 'ಕ್ರಿಮಿನಲ್‌ನನ್ನು ನಿಮ್ಮ ಮನೆಯಲ್ಲೆ ಅಡಗಿಸಿಟ್ಟಿದ್ದೀರಾ..?' ಎಂದು ಆರಗ ಜ್ಞಾನೇಂದ್ರ ವಿರುದ್ಧ ತೀಕ್ಷ್ಣ ದಾಳಿ ನಡೆಸಿದೆ.
"ಜಾನುವಾರು ವ್ಯಾಪಾರಿಯ ಕೊಲೆ ನಡೆದು ಇಷ್ಟು ದಿನಗಳಾದರೂ ಆರೋಪಿಯ ಬಂಧನವಾಗಿಲ್ಲ. ಆದರೆ ಕ್ರಿಮಿನಲ್ ಮಾತ್ರ ಸ್ವಚ್ಛಂದವಾಗಿ ತಿರುಗಾಡುತ್ತಾ ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆದರಿಕೆ ಹಾಕುತ್ತಿದ್ದಾನೆ. ಕರ್ನಾಟ ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿರುವುದಕ್ಕೆ ಇದು ಸಾಕ್ಷಿ" ಎಂದು ಮಂಗಳವಾರ ಜೆಡಿಎಸ್ ಪಕ್ಷ ಟ್ವೀಟ್ ಮಾಡಿದೆ.
ಆರೋಪಿ ಪುನೀತ್ ಕೆರೆಹಳ್ಳಿ ಜೊತೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಇರುವ ಫೋಟೋ ಹಂಚಿಕೊಂಡಿರುವ ಜೆಡಿಎಸ್, "ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಎಲ್ಲಿದ್ದೀರಿ ನೀವು..? ನಿಮಗಿನ್ನೂ ಈ ಸುದ್ದಿ ಮುಟ್ಟಿಲ್ಲವೆ..? ಅಥವಾ ಕ್ರಿಮಿನಲ್‌ನನ್ನು ನಿಮ್ಮ ಮನೆಯಲ್ಲೆ ಅಡಗಿಸಿಟ್ಟಿದ್ದೀರಾ..? ಬಿಜೆಪಿ ರಾಜ್ಯದಾದ್ಯಂತ ಕ್ರಿಮಿನಲ್‌ಗಳನ್ನು ಮೂಳೆ ಹಾಕಿ ಸಾಕಿದ ಪರಿಣಾಮ, ರಾಜ್ಯವೀಗ 'ಜಂಗಲ್ ರಾಜ್ಯ'ವಾಗಿದೆ" ಎಂದು ಆರೋಪಿಸಿದೆ.
"ಕೊಲೆ ಆರೋಪಿ ಮಾಜಿ ಸಿಎಂಗೆ ಬೆದರಿಕೆ ಹಾಕುತ್ತಾನೆಂದರೆ, ಜನಸಾಮಾನ್ಯರ ಗತಿಯೇನು..? ಸರ್ವ ಜನಾಂಗದ ಶಾಂತಿಯ ತೋಟವನ್ನು ಓಟುಗಳಿಗಾಗಿ ಒಡೆದಿದ್ದೆ ಕರ್ನಾಟಕ ಬಿಜೆಪಿಯ ಸಾಧನೆ. ಜನರಿಗೆ ರಾಜ್ಯ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲವಾಗುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ತನ್ನ ಘನತೆ ಕಾಪಾಡಿಕೊಳ್ಳಲಿ, ಕ್ರಿಮಿನಲ್‌ಗಳನ್ನು ಜೈಲಿಗೆ ತಳ್ಳಿ" ಎಂದು ಆಕ್ರೋಶ ಹೊರಹಾಕಿದೆ.

ಇನ್ನು, ಕಾಂಗ್ರೆಸ್ ಕೂಡ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದೆ. "ಜಾನುವಾರು ವ್ಯಾಪಾರಿಯನ್ನು ಕೊಲೆ ಮಾಡಿದ್ದೂ ಅಲ್ಲದೆ, ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಕೊಲೆಗಡುಕನ ಧೈರ್ಯದ ಹಿಂದಿನ ಕಾರಣವೇನು..? ಗೃಹಸಚಿವರು ಕೊಲೆ ಆರೋಪಿಯನ್ನು ತಮ್ಮದೇ ಮನೆಯಲ್ಲಿಟ್ಟುಕೊಂಡು ವಿಡಿಯೋ ಮೂಲಕ
ಸಿದ್ದರಾಮಯ್ಯ ಅವರಿಗೆ ಬೆದರಿಕೆ ಹಾಕಿಸುತ್ತಿದ್ದಾರೆಯೇ..? ಆರಗ ಜ್ಞಾನೇಂದ್ರ ಕೊಲೆ ಆರೋಪಿಯ ರಕ್ಷಣೆಗೆ ನಿಂತಿರುವರೆ..?" ಎಂದು ಕಟುವಾಗಿ ಪ್ರಶ್ನೆ ಮಾಡಿದೆ.
ಇನ್ನು, ರಾಮನಗರ ಜಿಲ್ಲೆಯ ಕನಕಪುರದ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಮುಂಜಾನೆ ಜಾನುವಾರು ಸಾಗಟ ವಾಹನದ ಸಹಾಯಕ ಚಾಲಕ ಇದ್ರೀಸ್ ಪಾಷಾ ಎಂಬುವವರನ್ನು ಹತ್ಯೆ ಮಾಡಲಾಗಿದೆ ಎಂದು ಮೃತರ ಕುಟುಂಬಸ್ಥರಿ ದೂರು ದಾಖಲಿಸಿದ್ದಾರೆ. ಈ ಕೊಲೆಯ ಆರೋಪ ಹೊತ್ತಿರುವ ಬಲಪಂಥೀಯ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಲೆ ಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ ಎಂದು ರಾಮನಗರ ಎಸ್‌ಪಿ ಕಾರ್ತೀಕ್ ರೆಡ್ಡಿ ಮಾಹಿತಿ ನೀಡಿದ್ದಾರೆ.












Click it and Unblock the Notifications