ಬ್ಯಾಟರಾಯನಪುರ ಬೆಂಕಿ ಅವಘಡ: ಮಾಲೀಕ ಸೇರಿ ಇಬ್ಬರ ಸೆರೆ
ಬೆಂಗಳೂರು ನ.11: ಬಾಪೂಜಿನಗರದಲ್ಲಿರುವ ರಾಸಾಯನಿಕ ಕಾರ್ಖಾನೆಯ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ , ಕಾರ್ಖಾನೆ ಮಾಲೀಕ ಸಜ್ಜನ್ ರಾವ್ ಉದ್ಯೋಗಿ ಅನಿಲ್ ಎಂಬುವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
'ಬೊಮ್ಮಸಂದ್ರದಲ್ಲಿ ರೇಖಾ ಕೆಮಿಕಲ್ಸ್ ಆ್ಯಂಡ್ ಕಾರ್ಪೊರೇಷನ್ ಕಾರ್ಖಾನೆ ಹೊಂದಿರುವ ಸಜ್ಜನರಾವ್, ಸ್ಯಾನಿಟೈಸರ್ ಹಾಗೂ ಥಿನ್ನರ್ ತಯಾರಿಸುತ್ತಿದ್ದರು. ಅದಕ್ಕೆ ಬೇಕಾದ ರಾಸಾಯನಿಕಗಳನ್ನು ಬಾಪೂಜಿನಗರದ ಜನ ವಸತಿ ಪ್ರದೇಶದಲ್ಲಿರುವ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರು. ಮಂಗಳವಾರ ಬೆಂಕಿ ಕಾಣಿಸಿಕೊಂಡು, ಗೋದಾಮು ಸುಟ್ಟು ಕರಕಲಾಗಿತ್ತು. ನೆರೆಹೊರೆಯ ಮನೆಗಳಿಗೂ ಹಾನಿಯಾಗಿತ್ತು.
ಇದೇ ಬೆಂಕಿ ಅವಘಡದಿಂದ ಪ್ಲಾಸ್ಟಿಕ್ ಅಂಗಡಿ ಸುಟ್ಟಿತ್ತು. ಅದರ ಮಾಲೀಕ ನಷ್ಟದ ಪರಿಹಾರ ಕೋರಿ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಿದ್ದರು.

ಇದರ ನಡುವೆಯೇ ಕಂಪನಿ ಮಾಲೀಕ ಸಜ್ಜನ್ ರಾವ್ ಹಾಗೂ ಕೆಲಸಗಾರ ಅನಿಲ್ ಅವರನ್ನು ಬಂಧಿಸಿದ್ದು, ಸ್ಪೋಟಕ ವಸ್ತುಗಳ ಕಾಯ್ದೆಯಡಿ ಬ್ಯಾಟರಾಯನಪುರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಗಳ ಬಂಧನ ಸಂಗತಿಯನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications