ನೀರಿನ ಸಂಪಿನಲ್ಲಿತ್ತು 2.68 ಕೋಟಿ ಮೌಲ್ಯದ 1,693 ಕೆಜಿ ರಕ್ತಚಂದನ!
ಬೆಂಗಳೂರು, ಜುಲೈ 26: ಆಂಧ್ರ ಪ್ರದೇಶದಿಂದ ಬೆಂಗಳೂರು ನಗರಕ್ಕೆ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾವಿರಾರು ಕೆಜಿ ರಕ್ತಚಂದನ ತುಂಡುಗಳನ್ನು ತಂದು, ಫಾರ್ಮ್‌ಹೌಸ್ ನೀರಿನ ಸಂಪ್ ನಲ್ಲಿ ಶೇಖರಿಸಿಟ್ಟಿದ್ದ ಆರೋಪದಡಿ ಓರ್ವ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ 2.68 ಕೋಟಿ ಮೌಲ್ಯದ 1,693ಕೆಜಿ ರಕ್ತಚಂದನ ವಶಕ್ಕೆ ಪಡೆಯಲಾಗಿದೆ.
ರಕ್ತ ಚಂದನಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದೆ. ಇದನ್ನು ಅಧಿಕೃತವಾಗಿ ಮಾರಾಟವನ್ನು ಮಾಡಲು ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಇದರಿಂದಾಗಿ ಕಳ್ಳ ದಾರಿಯ ಮೂಲಕ ಸಾಗಿಸಿ ಮಾರಾಟವನ್ನು ಮಾಡಿ ಸುಲಭವಾಗಿ ಹಣವನ್ನು ಮಾಡುವ ದಾರಿಯನ್ನು ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಆಂಧ್ರ ಪ್ರದೇಶದಲ್ಲಿ ಹೆಚ್ಚು ರಕ್ತಚಂದನ ಸ್ಮಗ್ಲಿಂಗ್ ನಡೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆಗಿಂದಾಗ್ಗೆ ರಕ್ತಚಂದನ ಮಾರಾಟಗಾರರು ಸಿಕ್ಕಿಬೀಳುತ್ತಾರೆ. ಅಪರೂಪಕ್ಕೆ ನಗರ ಕೇಂದ್ರ ಭಾಗದಲ್ಲಿ ರಕ್ತಚಂದನ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಟಿಂಬರ್ ಯಾರ್ಡ್‌ಗೆ ಬಂದಿದ್ದ. ರಕ್ತಚಂದನವನ್ನು ಮಾರಾಟವನ್ನು ಮಾಡುವ ಉದ್ದೇಶಕ್ಕಾಗಿ ಬಂದಿದ್ದ ಆಸಾಮಿ ಎರಡು ತುಂಡು ರಕ್ತಚಂದನವನ್ನು ಸಹ ತಂದಿದ್ದ. ಬ್ಯಾಟರಾಯನಪುರ ಪೊಲೀಸರು ರಕ್ತ ಚಂದನ ಮಾರಾಟದ ಬಗ್ಗೆ ಖಚಿತವಾದ ಮಾಹಿತಿಯನ್ನು ಸಂಗ್ರಹಿಸಿದ್ದರು. ಈ ವೇಳೆ ಟಿಂಬರ್ ಯಾರ್ಡ್‌ಗೆ ಬಂದಿದ್ದವನ್ನು ಬಲೆಗೆ ಕೆಡವಿದಾಗ ನೈಜ ಸಂಗತಿ ಹೊರಬಿದ್ದಿದೆ.

ಕೋಟಿ ಕೋಟಿ ಮೌಲ್ಯದ ರಕ್ತಚಂದನ ವಶಕ್ಕೆ
ತಮಿಳುನಾಡು ಮೂಲದ ವಿನೋದ್ ಬಂಧಿತ ಆರೋಪಿ. ಹೆಸರಘಟ್ಟದ ಫಾರ್ಮ್ ಹೌಸ್ ನಲ್ಲಿ ಕಳೆದ 15 ದಿನಗಳಿಂದ ಈತ ಕೆಲಸ ಮಾಡುತ್ತಿದ್ದ. ಜುಲೈ 22 ರಂದು ವಿನೋದ್ ಹಾಗೂ ಅಜಯ್ ಎಂಬುವರು ಸ್ಯಾಟ್ಲೈಟ್ ಬಸ್ ನಿಲ್ದಾಣದ ನ್ಯೂ ಟಿಂಬರ್ ಲೇಔಟ್ ನಲ್ಲಿ ಚಂದನದ ಎರಡು ತುಂಡುಗಳನ್ನು ಸ್ಯಾಂಪಲ್ ಆಗಿ ತಂದು ಮಾರಾಟ ಮಾಡಲು ಪ್ರಯತ್ನವನ್ನು ಮಾಡುತ್ತಿದ್ದರು. ರೆಡ್ ಸ್ಯಾಂಡಲ್ ವುಡ್ ಮಾರಾಟ ಮಾಡುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇನ್ಸ್‌ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಇಬ್ಬರು ಆರೋಪಿಗಳ ಪೈಕಿ ವಿನೋದ್ ಬಂಧಿಸಿದ್ದಾರೆ.

2.68 ಕೋಟಿ ಮೌಲ್ಯದ 1,693ಕೆಜಿ ರಕ್ತಚಂದನ
ವಿನೋದ್ ಬಂಧಿಸಿ ವಿಚಾರಣೆಯನ್ನು ನಡೆಸುವ ವೇಳೆಯಲ್ಲಿ ನೀಡಿದ ಮಾಹಿತಿಯನ್ನು ಆಧರಿಸಿ ಬ್ಯಾಟರಾಯನಪುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಹೆಸರಘಟ್ಟದ ಫಾರ್ಮ್ ಹೌಸ್ ನಲ್ಲಿ ನೀರಿಲ್ಲದ ಸಂಪ್ ನಲ್ಲಿ ರಕ್ತಚಂದನದ ತುಂಡುಗಳನ್ನು ಬಚ್ಚಿಟ್ಟಿದ್ದರು. ಆರೋಪಿಗಳಿಂದ ಒಟ್ಟು 2.68 ಕೋಟಿ ಮೌಲ್ಯದ 1,693 ಕೆಜಿರಕ್ತಚಂದನ ಜಪ್ತಿ ಮಾಡಿಕೊಂಡಿದ್ದಾರೆ.

ವಿನೋದ್ ಮಾರಾಟಕ್ಕೆ ಬಂದಿದ್ದ ರೂವಾರಿ
ರಕ್ತ ಚಂದನವನ್ನು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ವಿನೋದ್ ವಿಚಾರಣೆಯನ್ನು ನಡೆಸಿದ ಬಳಿಕ ಹಲವು ಮಹತ್ವದ ಲೀಡ್‌ಗಳು ಪೊಲೀಸರಿಗೆ ಸಿಕ್ಕಿತ್ತು. ಆ ಲೀಡ್ ನಂತೆಯೇ 2.68 ಕೋಟಿ ಮೌಲ್ಯದ ರಕ್ತಚಂದನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಇನ್ನು ಪ್ರಕರಣ ಸಂಬಂಧ ಸದ್ಯ ಓರ್ವನನ್ನ ಮಾತ್ರ ಬಂಧಿಸಲಾಗಿದೆ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಅಣತಿಯಂತೆ ವಿನೋದ್ ರಕ್ತ ಚಂದನ ತುಂಡುಗಳ ಮಾರಾಟಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ.

ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು
ವಿನೋದ್ ಮತ್ತು ಇತರೆ ಆರೋಪಿಗಳು ಎಷ್ಟು ತಿಂಗಳಿಂದ ಈ ರೀತಿ ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ಸೇರಿ ಹೆಚ್ಚಿನ ವಿವರದ ಬಗ್ಗೆ ಪರಾರಿಯಾಗಿರುವ ಆಗಿರುವ ಆರೋಪಿಗಳನ್ನ ಬಂಧಿಸಿದಾಗ ತಿಳಿಯಲಿದೆ. ಇನ್ನು ಫಾರ್ಮ್ ಹೌಸ್ ನ ಮಾಲೀಕರು ಯಾರೆಂಬುದು ಇನ್ನು ತಿಳಿದುಬಂದಿಲ್ಲ. ಮಾಲೀಕನ ಮಾಹಿತಿಗಾಗಿ ಗ್ರಾಮ ಲೆಕ್ಕಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.
''ಬ್ಯಾಟರಾಯನಪುರ ಪೊಲೀಸರು 1693 ಕೆಜಿ ರಕ್ತಚಂದನ ಜಪ್ತಿಮಾಡಿದ್ದಾರೆ. ಇದರ ಮೌಲ್ಯ 2.68 ಕೋಟಿಯಾಗಿದೆ. ಇದರ ಬಗ್ಗೆ ಅರಣ್ಯಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಮರ 40 ರಿಂದ 50 ವರುಷ ಹಳೆಯದಾಗಿರಬಹುದು. ಆಂಧ್ರ ಪ್ರದೇಶದ ಚಿತ್ತೂರು ಕಡೆಯಿಂದ ತಂದಿರುವ ಮಾಹಿತಿಯಿದೆ. ಪ್ರಮುಖ ಆರೋಪಿ ಸೆರೆ ಸಿಕ್ಕ ಬಳಿಕ ಮಾಹಿತಿ ಸಿಗಲಿದೆ. ರಕ್ತಚಂದನವನ್ನು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯ ನೀರಿನ ಸಂಪಿನಲ್ಲಿ ಬಚ್ಚಿಟ್ಟಿದ್ದರು. ಎಲ್ಲಾ ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದೇವೆ" ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications