ಬೆಂಗಳೂರಿನ ಈ ಭಾಗದಲ್ಲಿ ಕಲುಷಿತ ನೀರು ಪೂರೈಕೆ: ಪರಿಹಾರ ನೀಡಲು ಧಾವಿಸಿದ ಜಲಮಂಡಳಿ
ಬೆಂಗಳೂರು: ನಗರದ ಲಿಂಗರಾಜಪುರಂ ಪ್ರದೇಶದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದೂರುಗಳು ಬಂದಿವೆ. ಹೀಗಾಗಿ ಅಲ್ಲಿನ ಕುಡಿಯುವ ನೀರು ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆಧುನಿಕ ತಂತ್ರಜ್ಞಾನದಿಂದ ಸಮಸ್ಯೆ ಪತ್ತೆ ಮಾಡಿ ಸೋಮವಾರ ಸಂಜೆಯೊಳಗೆ ಪರಿಹಾರ ನೀಡುವುದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮಾಹಿತಿ ನೀಡಿದೆ.
ಲಿಂಗರಾಜಪುರಂ ವ್ಯಾಪ್ತಿಯಲ್ಲಿ ಕಲುಷಿತ ನೀರು ಪೂರೈಕೆ ಕುರಿತು ಬಂದ ದೂರು, ವರದಿಗಳನ್ನು ಬೆಂಗಳೂರು ಜಲಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ ತ್ವರಿತವಾಗಿ ಸ್ಪಂದಿಸಿದ ಜಲ ಮಂಡಳಿಯು, ಪೀಡಿತ ಪ್ರದೇಶಗಳಿಗೆ ನೀರು ಸರಬರಾಜನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆ ನಿಖರ ಪತ್ತೆಗೆ ರೋಬೋಟಿಕ್ ತಂತ್ರಜ್ಞಾನ ಬಳಕೆ
ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಮೂಲವನ್ನು ನಿಖರವಾಗಿ ಮತ್ತು ತ್ವರಿತವಾಗಿ ಪತ್ತೆಹಚ್ಚಲು, ಜಲಮಂಡಳಿಯು ತನ್ನ ಸಿಬ್ಬಂದಿಯೊಂದಿಗೆ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು (Robotic technology) ಬಳಸಿ ತಪಾಸಣೆಯನ್ನು ಭಾನುವಾರ ಮುಂಜಾನೆಯಿಂದಲೇ ಆರಂಭಿಸಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಇಡೀ ಪ್ರದೇಶವನ್ನು ಅಗೆಯುವ ಬದಲು, ದೋಷವಿರುವ ಜಾಗವನ್ನು ನಿಖರವಾಗಿ ಪತ್ತೆಹಚ್ಚಲು ಲಭ್ಯವಿರುವ ಎಲ್ಲ ತಾಂತ್ರಿಕ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. ದುರಸ್ತಿ ಕಾರ್ಯದ ಸಮಯದಲ್ಲಿ ನಿವಾಸಿಗಳಿಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಲು, ಜಲಮಂಡಳಿ ಈಗಾಗಲೇ 'ಸಂಚಾರಿ ಕಾವೇರಿ' ಮೊಬೈಲ್ ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ನಿನ್ನೆಯಿಂದಲೇ ಎಲ್ಲಾ ಪೀಡಿತ ಮನೆಗಳಿಗೆ ಉಚಿತ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.
ಸಮಸ್ಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಗುಡುವು
ಆದ್ಯತೆಯ ವಿಷಯವಾಗಿ ಪರಿಗಣಿಸಿರುವ ಮಂಡಳಿಯು, ಇಂಜಿನಿಯರಿಂಗ್ ತಂಡಕ್ಕೆ ಕಟ್ಟುನಿಟ್ಟಿನ ಗಡುವು ನೀಡಲಾಗಿದೆ. ಸೋಮವಾರ "ನಾಳೆ ಸಂಜೆಯೊಳಗೆ ಮೂಲವನ್ನು ಪತ್ತೆಹಚ್ಚಿ, ಪೈಪ್‌ಲೈನ್ ಸರಿಪಡಿಸಿ, ಶುದ್ಧ ನೀರು ಸರಬರಾಜನ್ನು ಪುನರಾರಂಭಿಸಲು ನಿರ್ದೇಶನ ನೀಡಲಾಗಿದೆ" ಎಂದು ಅಧ್ಯಕ್ಷರು ತಿಳಿಸಿದರು.
ಕುಡಿಯುವ ಕಾವೇರಿ ನೀರಿನ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಪುನರಾರಂಭ ಆಗುವವರೆಗೆ ಇಲ್ಲಿನ ನಿವಾಸಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ನಿಮಗೆ ಕುಡಿಯಲು ನೀರಿನ ತೊಂದರೆ ಆಗದಂತೆ ಒದಗಿಸಲಾಗುತ್ತಿರುವ ಉಚಿತ ವಾಟರ್ ಟ್ಯಾಂಕರ್ ಸೇವೆಯನ್ನು ಬಳಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications