BWSSB: ಅರ್ಹರಿಗೆ ಕಾವೇರಿ ನೀರಿನ ಸಂಪರ್ಕ ಸ್ಥಳದಲ್ಲೇ ಮಂಜೂರಿಗೆ ಸೂಚನೆ
ಬೆಂಗಳೂರು, ಡಿಸೆಂಬರ್ 6: ಬೃಹತ್ ಬೆಂಗಳೂರು ನಗರ ಪಾಲಿಕೆ (BBMP) ವ್ಯಾಪ್ತಿಗೆ ಸುಮಾರು ಹತ್ತು ವರ್ಷಗಳ ಹಿಂದೆ ಸೇರ್ಪಡೆಯಾದ 110 ಹಳ್ಳಿಗಳು ಕುಡಿಯುವ ಕಾವೇರಿ ನೀರಿನ ಸಂಪರ್ಕವನ್ನು ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ. ಈ ನಿಟ್ಟಿನಲ್ಲಿ ಅಷ್ಟು ಹಳ್ಳಿಗಳಲ್ಲಿ ಬೆಂಗಳೂರು ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿ ( BWSSB) ವತಿಯಿಂದ 'ಕಾವೇರಿ ಸಂಪರ್ಕ ಅಭಿಯಾನ' ಹಮ್ಮಿಕೊಳ್ಳಲಾಗಿದೆ. ಇದರ ಪ್ರಗತಿ ಪರಿಶೀಲಿಸಿದೆ ಮಂಡಳಿ ಅಧ್ಯಕ್ಷರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
110 ಹಳ್ಳಿಗಳ ವ್ಯಾಪ್ತಿಯಲ್ಲಿ ಕಾವೇರಿ ಕುಡಿಯುವ ನೀರಿನ ಹೊಸ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ ಗ್ರಾಹಕರಿಗೆ ಸ್ಥಳದಲ್ಲೇ ಅರ್ಜಿಯನ್ನು ವಿಲೇವಾರಿ ಮಾಡಬೇಕು. ತ್ವರಿತಗತಿಯಲ್ಲಿ ಕಾವೇರಿ ಕುಡಿಯುವ ನೀರಿನ ಸಂಪರ್ಕ ಮಂಜೂರು ಮಾಡಬೇಕು ಎಂದು ಶುಕ್ರವಾರ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ನಿರ್ದೇಶಿಸಿದರು.

ಅಭಿಯಾನದ ಭಾಗವಾಗಿ ಅವರು ಇಂದು ಅವಲಹಳ್ಳಿ, ಟಿಪ್ಪು ವೃತ್ತ ಹಾಗೂ ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಹೊಸದಾಗಿ ನೀರಿನ ಸಂಪರ್ಕ ಪಡೆಯುವಂತೆ ಉತ್ತೇಜಿಸುವ ಅಭಿಯಾನದ ಕಾರ್ಯಪ್ರಗತಿ ಬಗ್ಗೆ ಖುದ್ದು ಮಾಹಿತಿ ಪಡೆದರು.
5000 ಅರ್ಜಿ ಸಲ್ಲಿಕೆ: ಹೊಸ ಸಂಪರ್ಕ ಮಂಜೂರು
ರಾಜ್ಯದ ಉಪ ಮುಖ್ಯಮಂತ್ರಿಗ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ಈ ಅಭಿಯಾನ ಆರಂಭಿಸಲಾಗಿದೆ. ಅದರಡಿಯಲ್ಲಿ ಮನೆ ಮನೆಗೂ ತೆರಳಿ ಕಾವೇರಿ ಕುಡಿಯುವ ನೀರು ಸಂಪರ್ಕ ನೀಡಲಾಗುತ್ತಿದೆ. ಈ ಸಂಬಂಧ ಸಲ್ಲಿಕೆಯಾದ ಸುಮಾರು 5000 ಅರ್ಜಿಗಳನ್ನು ಪುರಸ್ಕರಿಸಿ ಮಂಜೂರು ಮಾಡಿ, ತ್ವರಿತವಾಗಿ ಹೊಸ ನೀರಿನ ಸಂಪರ್ಕ ಕೊಡಲಾಗಿದೆ.

ಕಾವೇರಿ ಸಂಪರ್ಕ ಅಭಿಯಾನದಲ್ಲಿ ಗ್ರಾಹಕರು ಹೊಸ ಸಂಪರ್ಕಕ್ಕಾಗಿ ಸಲ್ಲಿಸುವ ಅರ್ಜಿಗಳು ಹಾಗೂ ಅಗತ್ಯ ಶುಲ್ಕ ಸಂಗ್ರಹಿಸಿ ಸ್ಥಳದಲ್ಲೇ ಸಂಪರ್ಕ ಮಂಜೂರು ಮಾಡಬೇಕು. ಸಂಪರ್ಕ ಸಾಧ್ಯವಾಗುತ್ತಿದ್ದಂತೆ ನೀರು ಪೂರೈಕೆ ಮಾಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶಿಸಿದರು.
ಸಮಸ್ಯೆ, ಗೊಂದಲ ಪರಿಹರಿಸಿ: ನೀರಿನ ಸಂಪರ್ಕ ಕಲ್ಪಿಸಿ
ಹೊಸದಾಗಿ ಕಾವೇರಿ ನೀರು ಸಂಪರ್ಕ ಪಡೆಯುವ ಗ್ರಾಹಕರಲ್ಲಿ ಏನಾದರೂ ಸಂಶಯಗಳು ಇದ್ದಲ್ಲಿ, ಅವರ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಬೇಕು. ಜನರ ಸಂಶಯಗಳನ್ನು ಸ್ಥಳದಲ್ಲೇ ಪರಿಹರಿಸಬೇಕು. ಹೊಸ ಗ್ರಾಹಕರು ಅರ್ಜಿ ಸಲ್ಲಿಕೆ ವೇಳೆ ಯಾವ ಸಮಸ್ಯೆ ಆಗದಂತೆ ಜಲಮಂಡಳಿ ಸಿಬ್ಬಂದಿ ಗಮನಿಸಬೇಕು ಎಂದರು.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಹುನಿರೀಕ್ಷೆಯ ಕಾವೇರಿ 5 ನೇ ಹಂತದ ನೀರು ಸರಬರಾಜು ಯೋಜನೆ ಲೋಕಾರ್ಪಣೆ ಮಾಡಿದೆ. ಮೊದಲ ಬಾರಿಗೆ 100 ಕಿಲೋ ಮೀಟರ್ ದೂರದಿಂದ ಪೈಪ್ ಮೂಲಕ ಬೆಂಗಳೂರಿಗೆ ಕಾವೇರಿ ನೀರು ಹರಿದು ಬಂದಿದೆ.
ಸದ್ಯ ಜಲಮಂಡಳಿಯು 110 ಹಳ್ಳಿಗಳಿಗೆ ಕುಡಿಯುವ ನೀರಿಉ ಸರಬರಾಜು ಮಾಡಲು ಶಕ್ತವಾಗಿದೆ. ಆದ್ದರಿಂದ ಯಾರೆಲ್ಲ ಕಾವೇರಿ ನೀರಿನ ಸಂಪರ್ಕ ಪಡೆದಿಲ್ಲ, ಈ ಅಭಿಯಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಜನರಲ್ಲಿ ಕೋರಿದ್ದಾರೆ.












Click it and Unblock the Notifications