Bengaluru: ನೀರು ಸಮಸ್ಯೆಗಳ ಪರಿಹಾರಕ್ಕಾಗಿ ಸ್ಟಾರ್ಟ್‌ಅಪ್‌ಗಳಿಗೆ BWSSB ರೆಡ್ ಕಾರ್ಪೆಟ್
ಬೆಂಗಳೂರು, ನವೆಂಬರ್ 24: "ಬ್ರಾಂಡ್ ಬೆಂಗಳೂರು' ಕಲ್ಪನೆಯಡಿ ಸ್ಥಳೀಯ ಸಮಸ್ಯೆಗಳಿಗೆ ಅದರಲ್ಲೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಮುಂದಾಗಿದೆ. ಸಂಸ್ಕರಿಸಿದ ನೀರಿನ ಸಂಶೋಧನೆ ಮತ್ತು ಮಾರುಕಟ್ಟೆ ವಿಸ್ತರಣೆಗಾಗಿ ಸ್ಟಾರ್ಟ್‌ಅಪ್‌ಗಳಿಗೆ ತನ್ನ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ (WWTP) ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದೆ.
ಈ ಸಂಬಂಧ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ಅವರು ಮಾಹಿತಿ ನೀಡಿದ್ದಾರೆ. "ಬ್ರಾಂಡ್ ಬೆಂಗಳೂರು'ಅಡಿ ರಾಜಧಾನಿಯ ನೀರಿನ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ (BWSSB) ಸ್ಟಾರ್ಟ್‌ಅಪ್‌ಗಳಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಮಾಡಲು ಸಜ್ಜಾಗಿದೆ. ಇದರಿಂದಾಗಿ ನಗರದ ನೀರಿನ ಸಮಸ್ಯೆಗಳಿಗೆ ಪರಿಹಾರದ ಕಂಡುಕೊಳ್ಳಲಾಗುವುದು. ನವೋದ್ಯಮಗಳಿಗೆ ಕೇವಲ ನೀರು ಒದಗಿಸುವುದಷ್ಟೇ ಅಲ್ಲದೆ, ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಇದೊಂದು ಮಹತ್ತರ ಅವಕಾಶವಾಗಿದೆ ಎಂದರು.

ಯೋಜನೆಯ ಪ್ರಯೋಜನಗಳು, ಮುಖ್ಯಾಂಶಗಳು
* ಬೆಂಗಳೂರಿನ ಕಾಡು ಬಿಸನಹಳ್ಳಿಯಲ್ಲಿ 'ಬೋಸನ್'ಗೆ ಅವಕಾಶ: ಈ ಯೋಜನೆಯ ಮೊದಲ ಭಾಗವಾಗಿ, ಕಾಡು ಬಿಸನಹಳ್ಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸಲು 'ಬೋಸನ್ ವೈಟ್ ವಾಟರ್' (Boson Whitewater) ಸಂಸ್ಥೆಗೆ ಅನುಮತಿ ನೀಡಿದೆ.
* ಹೂಡಿಕೆ ಮತ್ತು ಸಹಕಾರ ಮಾದರಿ: ಈ ಯೋಜನೆಯಡಿ ಜಲಮಂಡಳಿಯಿಂದ ಹೂಡಿಕೆ ಮಾಡಲ್ಲ. ಬದಲಾಗಿ ಬೋಸನ್ ಸಂಸ್ಥೆಯು ತಮ್ಮ ಸ್ವಂತ ವೆಚ್ಚದಲ್ಲಿ ಅಗತ್ಯವಿರುವ ಅತ್ಯಾಧುನಿಕ ಶುದ್ಧೀಕರಣ ಉಪಕರಣ ಅಳವಡಿಕೆ ಮುಂದಾಗಿದೆ. ಮುಂದೆ ಬರುವ ಸ್ಟಾರ್ಟ್ ಅಪ್‌ಗಳಿಗೆ ಕಚ್ಚಾ ವಸ್ತುವಾಗಿ 'ತ್ಯಾಜ್ಯ ನೀರನ್ನು' BWSSB ಸರಬರಾಜು ಮಾಡುತ್ತದೆ. ಜೊತೆಗೆ ಸಂಸ್ಕರಿಸಿದ ನೀರು ಮಾರಾಟಕ್ಕೆ ಮಾರುಕಟ್ಟೆ ಒದಗಿಸಿ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.
* ಸ್ಟಾರ್ಟ್‌ಅಪ್‌ಗಳಿಗೆ ಕಲಿಕೆಯ ವೇದಿಕೆ: ಯೋಜನೆಯಿಂದ ಸ್ಟಾರ್ಟ್‌ಅಪ್‌ಗಳಿಗೆ ನೈಜ ವಾತಾವರಣದ ಸಂಶೋಧನೆ ಮಾಡಲು ಸಹಾಯವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಘಟಕವನ್ನು ನಿರ್ವಹಿಸಿ, ನೀರಿನ ವಾಣಿಜ್ಯೀಕರಣ ಹಾಗೂ ಕ್ಷೇತ್ರ ಮಟ್ಟದಲ್ಲಿ ಎದುರಾಗುವ ಪ್ರಾಯೋಗಿಕ ಸಮಸ್ಯೆಗಳ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ.
* 70,000 ಲೀಟರ್ ನೀರು ಸಿಗುತ್ತೆ: ಬೋಸನ್ ಸಂಸ್ಥೆಯ ಪೈಲಟ್ ಯೋಜನೆಯ ಮೂಲಕ ಈಗಾಗಲೇ ದಿನಕ್ಕೆ 70,000 ಲೀಟರ್‌ಗಳಷ್ಟು ಉನ್ನತ ಗುಣಮಟ್ಟದ ಸಂಸ್ಕರಿಸಿದ ನೀರು ಬಳಕೆಗೆ ಸಿಗಲಿದೆ ಎಂದು ಜಲಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.
ರಾಜಧಾನಿಗೆ ಎದುರಾದ ನೀರಿನ ಸವಾಲುಗಳಿಗೆ ಇಲ್ಲಿನ ಪ್ರತಿಭಾವಂತ ಸ್ಟಾರ್ಟ್‌ಅಪ್‌ಗಳ ಬಳಿಯೇ ಪರಿಹಾರ ಇದೆ. ಅವರಿಗೆ ಸಂಶೋಧನೆ ಮತ್ತು ಪ್ರಯೋಗಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಇದರಿಂದ ಭವಿಷ್ಯದಲ್ಲಿ ನೀರಿನ ಮರುಬಳಕೆ ಕ್ಷೇತ್ರ ಬಲಗೊಳ್ಳಲಿದೆ. ನಗರವು ನೀರಿನ ಸ್ವಾವಲಂಬನೆ ಸಾಧಿಸಲಿದೆ ಎಂದು BWSSB ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications