ಸಂಪಿಗೆ ರಸ್ತೆಯಲ್ಲಿ ಶೀಘ್ರ ವೈಟ್ ಟಾಪಿಂಗ್ ಕಾಮಗಾರಿ ಶುರು
ಬೆಂಗಳೂರು, ಫೆಬ್ರವರಿ 23:ನಗರದ ಮಲ್ಲೇಶ್ವರದಲ್ಲಿರುವ ಸಂಪಿಗೆ ರಸ್ತೆಯಲ್ಲಿ ಶೀಘ್ರ ವೈಟ್ ಟಾಪಿಂಗ್ ಕಾಮಗಾರಿ ಶುರುವಾಗಲಿದೆ.
ಬಿಬಿಎಂಪಿಯು ವೈಟ್ ಟಾಪಿಂಗ್ ಕಾಮಗಾರಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಂಪಿಗೆ ಚಿತ್ರ ಮಂದಿರದಿಂದ ಮಲ್ಲೇಶ್ವರ 18ನೇ ಕ್ರಾಸ್‌ವರೆಗೆ 1.8 ಕಿ.ಮೀ ಉದ್ದದ ರಸ್ತೆಯನ್ನು ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಟಾಪಿಂಗ್ ಮಾಡಲಾಗುತ್ತಿದೆ.
ಕಾಮಗಾರಿ ಪೂರ್ಣಕ್ಕೆ ಮೂರು ತಿಂಗಳು ಬೇಕಾಗಲಿದೆ ಎಂದು ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.

ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮತ್ತೊಂದು ಬದಿಯಲ್ಲಿ ಕಾಮಗಾರಿ ನಡೆಸುವುದಕ್ಕೆ ಸಂಚಾರ ಪೊಲೀಸರು ಬಿಬಿಎಂಪಿ ಅನುಮತಿ ನೀಡಿದ್ದಾರೆ.
ಸಂಪಿಗೆ ರಸ್ತೆಯಲ್ಲಿರುವ ಐತಿಹಾಸಿಕ ಕಾಡು ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಫೆ.28ರಿಂದ ಮಾರ್ಚ್ 7ರ ವರೆಗೆ ವಿಶೇಷ ಪೂಜೆ, ರಥೋತ್ಸವಗಳು ಜರುಗಲಿವೆ.
ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಹಬ್ಬದ ಬಳಿಕ ಕಾಮಗಾರಿ ಆರಂಭಿಸುವಂತೆ ಸ್ಥಳೀಯರು ಪಾಲಿಕೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಬುಧವಾರ ಈ ಬಗ್ಗೆ ಚರ್ಚೆ ನಡೆಸಿ ಅಧಿಕೃತ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications