Industry: ಕರ್ನಾಟಕದಲ್ಲಿ 20,000 ವೋಲ್ವೋ ಬಸ್-ಟ್ರಕ್ ಉತ್ಪಾದನೆ ಗುರಿ: GIM 2025
ಬೆಂಗಳೂರು, ಫೆಬ್ರವರಿ 13: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 'ಜಾಗತಿಕ ಹೂಡಿಕೆದಾರರ ಸಮಾವೇಶ 2025' ಮೂರನೇ ದಿನ ಕಾಲಿಟ್ಟಿದೆ. ಇಂದು ಸಹ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಹೂಡಿಕೆಗಳು ಘೋಷಣೆ ಆಗಿವೆ. ಸದ್ಯ ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್ ಮೂಲದ ವೋಲ್ವೊ ಕಂಪನಿಯು ತನ್ನ ವ್ಯಾಪ್ತಿಯನ್ನು ರಾಜ್ಯದಲ್ಲಿ ವಿಸ್ತರಣೆ ಮಾಡುವುದಾಗಿ ಘೋಷಿಸಿದೆ.
ಹೌದು, ಐಶಾರಾಮಿ ಬಸ್ ಉತ್ಪಾದನಾ ಕಂಪನಿ 'ವೋಲ್ವೊ' ಕರ್ನಾಟಕದ ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದೆ. ಇದಕ್ಕಾಗಿ 1,400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ Invest Karnataka 2025 ಪ್ರಕಟಿಸಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸ್ವೀಡನ್ ಮೂಲದ ವೋಲ್ವೊ ಕಂಪನಿ ಜೊತೆಗೆ 1,400 ಕೋಟಿ ರೂ. ಹೂಡಿಕೆ ಸಂಬಂಧ ಗುರುವಾರ ಅಧಿಕೃತ ಒಪ್ಪಂದ ನಡೆಯಿತು. ಸಚಿವರು, ಕೈಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಒಪ್ಪಂದಕ್ಕೆ ಸಾಕ್ಷಿಯಾದರು. ವೋಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದರು.
ವೊಲ್ವೋ ಕಂಪನಿ ಹೂಡಿಕೆ: ಸಿಎಂ ಹೇಳಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ವೋಲ್ವೋ ಕಂಪನಿಯು 25 ವರ್ಷಗಳ ಹಿಂದೆಯೇ ರಾಜ್ಯಕ್ಕೆ ಬಂದು, ಬಂಡವಾಳ ಹೂಡಿ, ಬದಲಾವಣೆಗೆ ನಾಂದಿ ಹಾಡಿತು. ಈಗ ನಮ್ಮಲ್ಲಿ ವೋಲ್ವೊ ಎನ್ನುವುದು ಉತ್ಕೃಷ್ಟ ಗುಣಮಟ್ಟದ ಬಸ್ಸುಗಳಿಗೆ ಇನ್ನೊಂದು ಹೆಸರಾಗಿದೆ. ರಾಜ್ಯ ಸಾರಿಗೆ ನಿಗಮದ ಐಷಾರಾಮಿ ಬಸ್ಸುಗಳನ್ನು ಕೂಡ ಜನ ಇದೇ ಹೆಸರಿನಿಂದ ಕರೆಯುತ್ತಿದ್ದಾರೆ. ವೋಲ್ವೊ ಕಂಪನಿಗೆ ಸರ್ಕಾರ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಲಿದೆ. ಕಂಪನಿಯು ತನ್ನಲ್ಲಿ ಹೆಚ್ಚಿನ ಕನ್ನಡಿಗರಿಗೆ ಕೆಲಸ ಕೊಡಬೇಕು. ಇದರಿಂದ ಸ್ಥಳೀಯರಿಗೆ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು ಎಂದು ತಿಳಿಸಿದರು.

ವೋಲ್ವೊ ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಮಾತನಾಡಿ, ಕರ್ನಾಟಕದಲ್ಲಿ ಕಂಪನಿಯು ಪೀಣ್ಯ, ಹೊಸಕೋಟೆ ಸೇರಿ ವಿವಿಧೆಡೆ ತಯಾರಿಕಾ ಘಟಕಗಳನ್ನು ಹೊಂದಿದೆ. ಈಗ ನಾವು ವರ್ಷಕ್ಕೆ ಇಲ್ಲಿ 3,000 ಬಸ್/ಟ್ರಕ್ ತಯಾರಿಸುತ್ತಿದ್ದೇವೆ. ಹೊಸಕೋಟೆ ಸ್ಥಾವರದ ವಿಸ್ತರಣೆಯಿಂದ ನಾವು ವರ್ಷಕ್ಕೆ 20,000 ಬಸ್/ಟ್ರಕ್ ತಯಾರಿಸಬಹುದು.
ಇಂದಿನ ಒಪ್ಪಂದಿಂದ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗುತ್ತದೆ. ಜೊತೆಗೆ ಸ್ಥಳೀಯವಾಗಿ ಉದ್ಯೋಗಸೃಷ್ಟಿಯೂ ಆಗಲಿದೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನ ಮತ್ತಷ್ಟು ಸುಭದ್ರವಾಗಲಿದೆ. ಜತೆಗೆ ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸರಾಗವಾಗಿ ಪೂರೈಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು ವೋಲ್ವೋ ಕಂಪನಿಯ ಪಾಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 4ನೇ ಅತಿದೊಡ್ಡ ತಾಣವಾಗಿದೆ. ಇಲ್ಲಿರುವ ನಮ್ಮ ಜಿಸಿಸಿ ಕೇಂದ್ರದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಆರ್ & ಡಿ, ಐಟಿ, ಖರೀದಿ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆ ನಿರ್ವಹಿಸಲಾಗುತ್ತಿದೆ. ಇದಲ್ಲದೆ ಮಧ್ಯಪ್ರದೇಶದಲ್ಲಿ ಕೂಡ ಜಂಟಿ ಸಹಭಾಗಿತ್ವದ ಯೋಜನೆ ಜಾರಿಯಲ್ಲಿದೆ. ಕಂಪನಿಯ ವಹಿವಾಟು ಈಗ ವರ್ಷಕ್ಕೆ 50 ಬಿಲಿಯನ್ ಡಾಲರ್ ದಾಟಿದೆ ಎಂದು ವಿವರಿಸಿದರು.












Click it and Unblock the Notifications