ಕೊಡಗು ಪ್ರವಾಹ: ಮೋದಿ ಜತೆ ಬಿಎಸ್‌ವೈ ಚರ್ಚೆ
ಬೆಂಗಳೂರು, ಆಗಸ್ಟ್ 21: ಕರ್ನಾಟಕದ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಭೀಕರ ಪ್ರವಾಹ ಹಾಗೂ ಮಳೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗಸ್ಟ್ 22ರಂದು ಬುಧವಾರ ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಆಸ್ತಿ-ಪಾಸ್ತಿ ನಷ್ಟ ಹಾಗೂ ಬೆಳೆ ಹಾನಿ ಕುರಿತಂತೆ ಪ್ರಧಾನಿಗೆ ಮನವರಿಕೆ ಮಾಡಲಿರುವ ಯಡಿಯೂರಪ್ಪ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಹ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಬುಧವಾರ ಬೆಳಗ್ಗೆ ದೆಹಲಿಯಲ್ಲಿ ಬಿಜೆಪಿ ಮುಖಂಡರ ಸಭೆ ನಡೆಯಲಿದೆ ನಾನೂ ಪಾಲ್ಗೊಳ್ಳುತ್ತೇನೆ, ಸಭೆ ಬಳಿಕ ಪ್ರಧಾನಿಗಳ ಜತೆ ಪ್ರವಾಹ ಪರಿಸ್ಥಿತಿ ಕುರಿತಂತೆ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ ಅಸ್ತಿಯನ್ನು ದೇಶದ ನಾನಾ ನದಿಗಳಲ್ಲಿ ವಿಸರ್ಜಿಸಲು ತೀರ್ಮಾನಿಸಲಾಗಿದೆ ಅದರ ಅಂಗವಾಗಿ ಆಗಸ್ಟ್ 23ರಂದು ಕೃಷ್ಣಾ, ಕಾವೇರಿ, ತುಂಗಭದ್ರಾ, ಭೀಮಾ, ಮಲಪ್ರಭಾ ಸೇರಿದಂತೆ ಹಲವು ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಈ ಜವಾಬ್ದಾರಿಯನ್ನು ಬೇರೆ ಬೇರೆ ನಾಯಕರಿಗೆ ಒಪ್ಪಿಸಲಾಗಿದೆ. ಆಗಸ್ಟ್ 26ರಂದು ಬೆಂಗಳೂರಲ್ಲಿ ದಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications