ಬೆಂಗಳೂರು ಸಬ್ ಅರ್ಬನ್ ರೈಲು: 'ಮಲ್ಲಿಗೆ' ಕಾರಿಡಾರ್ ಹಳಿ ಜೋಡಣೆ ಅಪ್‌ಡೇಟ್
ಬೆಂಗಳೂರು, ಏಪ್ರಿಲ್ 15: ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನ ಮಾಡುತ್ತಿವೆ. ಈ ಯೊಜನೆಯಲ್ಲಿ 2026ರಲ್ಲಿ ಮೊದಲ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಬಿಎಸ್‌ಆರ್‌ಪಿ ಸುಮಾರು 148 ಕಿ. ಮಿ. ಯೋಜನೆಯಾಗಿದ್ದು, 4 ಕಾರಿಡಾರ್‌ಗಳನ್ನು ಇದು ಒಳಗೊಂಡಿದೆ.
ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಬಿಎಸ್‌ಆರ್‌ಪಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಸದ್ಯ ಯೋಜನೆಯ ಕಾರಿಡಾರ್-2 (ಮಲ್ಲಿಗೆ) ಕುರಿತು ಅಪ್‌ಡೇಟ್ ಒಂದು ಸಿಕ್ಕಿದೆ. ಬಿಎಸ್‌ಆರ್‌ಪಿ ಯೋಜನೆಯಲ್ಲಿ ಮಲ್ಲಿಗೆ ಕಾರಿಡಾರ್‌ನಲ್ಲಿ ಮೊದಲ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.

23.86 ಕಿ. ಮೀ. ಉದ್ದದ 'ಮಲ್ಲಿಗೆ' ಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಕಾರಿಡಾರ್‌ನ ಹಳಿಗಳ ನಿರ್ಮಾಣದ ಟೆಂಡರ್ ಅನ್ನು ರಹಿ ಇನ್‌ಫ್ರಾಸ್ಟ್ರೆಕ್ ಲಿಮಿಟೆಡ್ ಪಡೆದುಕೊಂಡಿದೆ. ಎಲ್ & ಟಿ ಈ ಕಾರಿಡಾರ್ ನಿರ್ಮಾಣದ ಟೆಂಡರ್ ಅನ್ನು ಪಡೆದು, ಮೂಲ ಕೆಲಸಗಳನ್ನು ಪ್ರಾರಂಭಿಸಿದೆ.
ಹಳಿಗಳ ಜೋಡಣೆ ಗುತ್ತಿಗೆ: ಮಲ್ಲಿಗೆ ಕಾರಿಡಾರ್‌ನ ಹಳಿಗಳ ನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿ ಪೂರೈಕೆ ಮಾಡುವುದು, ಹಳಿಗಳಿಗೆ ಹಾಕುವ ವಿವಿಧ ಸಾಮಾಗ್ರಿ ಪೂರೈಕೆ, ಸೋಲದೇವನಹಳ್ಳಿ ಡಿಪೋ ತನಕ ಹಳಿಗಳ ನಿರ್ಮಾಣದ ಟೆಂಡರ್ ರಹಿ ಇನ್‌ಫ್ರಾಸ್ಟ್ರೆಕ್ ಲಿಮಿಟೆಡ್ ಪಾಲಾಗಿದೆ.
2024ರ ಆಗಸ್ಟ್‌ನಲ್ಲಿ ಕೆ-ರೈಡ್ ಮಲ್ಲಿಗೆ ಕಾರಿಡಾರ್ ಹಳಿಗಳ ನಿರ್ಮಾಣದ ಟೆಂಡರ್ ಕರೆದಿತ್ತು. ಇದು ಸುಮಾರು 102.24 ಕೋಟಿ ರೂ.ಗಳ ಮೊತ್ತದ ಟೆಂಡರ್ ಆಗಿತ್ತು. ಇದನ್ನು ಪೂರ್ಣಗೊಳಿಸಲು 2 ವರ್ಷಗಳ ಗಡುವು ನೀಡಿತ್ತು. 2024ರ ಅಕ್ಟೋಬರ್‌ನಲ್ಲಿ ತಾಂತ್ರಿಕ ಬಿಡ್‌ಗಳನ್ನು ತೆರೆಯಲಾಯಿತು. 4 ಕಂಪನಿಗಳು ಬಿಡ್‌ಗಳನ್ನು ಸಲ್ಲಿಕೆ ಮಾಡಿದ್ದವು.
ಆದರೆ ತಾಂತ್ರಿಕ ಅಂಶಗಳ ಪರಿಶೀಲನೆ ವೇಳೆ ಮೂರು ಕಂಪನಿಗಳ ಬಿಡ್‌ಗಳನ್ನು ತಿರಸ್ಕಾರ ಮಾಡಲಾಯಿತು. ರಹಿ ಇನ್‌ಫ್ರಾಸ್ಟ್ರೆಕ್ ಲಿಮಿಟೆಡ್ 103.92 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಕೆ ಮಾಡಿತ್ತು. ಆದ್ದರಿಂದ ಈ ಕಂಪನಿಗೆ ಟೆಂಡರ್ ಅನ್ನು ನೀಡಲಾಗಿದೆ.
ವಿನ್ಯಾಸ, ಪೂರೈಕೆ, ನಿರ್ಮಾಣ, ಪರೀಕ್ಷೆಯನ್ನು ಈ ಟೆಂಡರ್ ನಿಯಮ ಒಳಗೊಂಡಿದೆ. ಬೆನ್ನಿಗಾನಹಳ್ಳಿ-ಚಿಕ್ಕಬಣಾವರ ತನಕ ಹಳಿಗಳ ನಿರ್ಮಾಣದ ಜೊತೆಗೆ ಸೋಲದೇವನಹಳ್ಳಿ ಡಿಪೋಗೆ ಸಹ ಅಗತ್ಯ ಸಾಮಾಗ್ರಿಯನ್ನು ಇದು ಪೂರೈಕೆ ಮಾಡಬೇಕಿದೆ.
2022ರಲ್ಲಿ ಎಲ್ & ಟಿ 'ಮಲ್ಲಿಗೆ' ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಪಡೆದಿತ್ತು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಮೊದಲ ಕಾರಿಡಾರ್ ಟೆಂಡರ್ ಇದಾಗಿದೆ. ಆದರೆ ಭೂ ಸ್ವಾಧೀನದ ವಿವಾದದ ಕಾರಣ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವುದು ತಡವಾಗುತ್ತಿದೆ.
ಸಬ್ ಅರ್ಬನ್ ರೈಲು 'ಮಲ್ಲಿಗೆ' ಕಾರಿಡಾರ್‌ನಲ್ಲಿ 12 ನಿಲ್ದಾಣಗಳು ಬರಲಿವೆ. ಇದರಲ್ಲಿ ಬೆನ್ನಿಗಾನಹಳ್ಳಿ (ಇಂಟರ್ ಚೇಂಜ್ ನಿಲ್ದಾಣ), ಕಸ್ತೂರಿ ನಗರ, ಸೇವಾ ನಗರ, ಬಣಸವಾಡಿ, ಕಾವೇರಿ ನಗರ, ನಾಗವಾರ, ಕನಕನಗರ, ಹೆಬ್ಬಾಳ, ಮತ್ತಿಕೆರೆ, ಯಶವಂತಪುರ, ಜಾಲಹಳ್ಳಿ, ಶೆಟ್ಟಿಹಳ್ಳಿ, ಮೈದಾರಹಳ್ಳಿ, ಚಿಕ್ಕಬಣಾವರ ನಿಲ್ದಾನಗಳಿವೆ.
ಕರ್ನಾಟಕ ಸರ್ಕಾರ 2025ರ ಡಿಸೆಂಬರ್‌ನಲ್ಲಿ ಈ ಕಾರಿಡಾರ್ ಅನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದೆ. ಚಿಕ್ಕಬಣಾವರ ಸಮೀಪದ ಸೋಲದೇವನಹಳ್ಳಿಯಲ್ಲಿ ಈ ಕಾರಿಡಾರ್ ರೈಲುಗಳ ನಿರ್ವಹಣೆಯ ಡಿಪೋ ಸಹ ನಿರ್ಮಾಣವಾಗಲಿದೆ.
ಸಬ್ ಅರ್ಬನ್ ರೈಲು ಯೋಜನೆಗೆ ಈಗಾಗಲೇ 306 ಬೋಗಿ ಖರೀದಿ ಮಾಡಲು ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಇದಕ್ಕೆ ಸುಮಾರು 2,135 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಬೋಗಿಯ ಖರೀದಿಗೆ ಉಳಿದ ಪಾಲನ್ನು ಕೇಂದ್ರ ಸರ್ಕಾರ ನೀಡಲಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಮ್ಮ ಮೆಟ್ರೋ ಮಾದರಿಯ ಎಸಿ ರೈಲು ಬೋಗಿಯನ್ನು ಈ ಯೋಜನೆಗೆ ಪೂರೈಕೆ ಮಾಡಲಿದೆ ಎಂಬ ಮಾಹಿತಿ ಇದೆ. ರೈಲ್ವೆ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಐಸಿಎಫ್ ಆಸಕ್ತ ಕಂಪನಿಗಳಿಂದ ಬೋಗಿಯ ವಿನ್ಯಾಸವನ್ನು ನೀಡುವಂತೆ ಈಗಾಗಲೇ ಆಹ್ವಾನ ನೀಡಿದೆ.












Click it and Unblock the Notifications