ಸಬ್ ಅರ್ಬನ್ ರೈಲು ಯೋಜನೆ: ಬೆಂಗಳೂರು ಜನರಿಗೆ ಸಿಹಿಸುದ್ದಿ
ಬೆಂಗಳೂರು, ಮೇ 11: ಬೆಂಗಳೂರು ನಗರದ ಸಂಚಾರ ದಟ್ಟಣೆ ತಪ್ಪಿಸುವ ಪ್ರಮುಖ ಯೋಜನೆಯಾದ ಸಬ್ ಅರ್ಬನ್ ರೈಲು ಯೋಜನೆ ಬಗ್ಗೆ ಸಿಹಿಸುದ್ದಿಯೊಂದಿದೆ. ಯೋಜನೆಗೆ ಹಣಕಾಸು ನೆರವು ನೀಡಲು ವಿದೇಶಿ ಬ್ಯಾಂಕ್ ಪ್ರಾಥಮಿಕ ಒಪ್ಪಿಗೆ ನೀಡಿದ್ದು, ಯೋಜನೆ ಚುರುಕುಗೊಳ್ಳಲಿದೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕರ್ನಾಟಕ) ಲಿಮಿಟೆಡ್ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ನಗರದಲ್ಲಿ ಒಟ್ಟು 4 ಕಾರಿಡಾರ್ ನಿರ್ಮಾಣವಾಗುತ್ತಿದೆ. ಕೆಲವು ಕಾರಿಡಾರ್‌ನ ಪ್ರಾಥಮಿಕ ಕಾಮಗಾರಿಗಳು ಈಗಾಗಲೇ ಆರಂಭವಾಗಿದೆ.

ಈ ಯೋಜನೆಗೆ 2,693 ಕೋಟಿ ಬಂಡವಾಳವನ್ನು ನೀಡಲು ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ಒಪ್ಪಿಗೆ ನೀಡಿದೆ. ಅಲ್ಲದೇ ಹೀಲಲಿಗೆ-ರಾಜಾನುಕುಂಟೆ ನಡುವಿನ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗ ನಿರ್ಮಾಣದ ಪ್ರಾಥಮಿಕ ಕೆಲಸವನ್ನು ಆರಂಭಿಸಲಾಗಿದೆ. ನಾಲ್ಕು ಕಾರಿಡಾರ್ ಪೈಕಿ ಇದೇ ಅತಿ ಉದ್ದದ ಕಾರಿಡಾರ್ ಆಗಿದೆ.
ಅಧಿಕಾರಿಗಳ ಮಾಹಿತಿ: ಕೆ-ರೈಡ್‌ನ ಪ್ರಾಜೆಕ್ಟ್ ಮತ್ತು ಪ್ಲಾನಿಂಗ್ ನಿರ್ದೇಶಕರಾದ ರಾಜೇಶ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) 2,693 ಕೋಟಿ ಬಂಡವಾಳ ನೀಡಲು ಪ್ರಾಥಮಿಕ ಒಪ್ಪಿಗೆ ನೀಡಿದೆ. ಯೋಜನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ 20ರಷ್ಟು ಅನುದಾನ ನೀಡಲಿವೆ" ಎಂದರು.
ಸುಮಾರು 148.1 ಕಿ. ಮೀ. ಸಬ್ ಅರ್ಬನ್ ಯೋಜನೆಯಲ್ಲಿ 4 ಕಾರಿಡಾರ್‌ಗಳಿವೆ. ಇವುಗಳಲ್ಲಿ ಎಲ್ & ಟಿ ಕಂಪನಿಗೆ ಹೀಲಲಿಗೆ-ರಾಜನಕುಂಟೆ (46.8 ಕಿ. ಮೀ.) ಕನಕ ಕಾರಿಡಾರ್ ಮತ್ತು ಬೆನ್ನಿಗಾನಹಳ್ಳಿ-ಚಿಕ್ಕಬಣಾವರ ನಡುವಿನ (25 ಕಿ. ಮೀ.)ಮಲ್ಲಿಗೆ ಕಾರಿಡಾರ್ ಟೆಂಡರ್ ನೀಡಲಾಗಿದೆ.
ಮಲ್ಲಿಗೆ ಕಾರಿಡಾರ್‌ನ ಶೇ 20ರಷ್ಟು ನಿರ್ಮಾಣ ಕಾಮಗಾರಿಯನ್ನು ಎಲ್ & ಟಿ ಪೂರ್ಣಗೊಳಿಸಿದೆ. ಮೇ 7ರಿಂದ ಕನಕ ಕಾರಿಡಾರ್‌ನ ನಿರ್ಮಾಣ ಕಾರ್ಯದ ಮೊದಲ ಹಂತವನ್ನು ಆರಂಭಿಸಲಾಗಿದೆ. ರೈಲ್ವೆ ಹಳಿಯ ಪಕ್ಕದಲ್ಲಿ ಕಾಮಗಾರಿಗಾಗಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುತ್ತಿದೆ.
ಕಳೆದ ನಾಲ್ಕು ತಿಂಗಳಿನಿಂದ ಮಣ್ಣಿನ ಪರೀಕ್ಷೆ, ಮಾರ್ಗದ ಪುನಃ ಸಮೀಕ್ಷೆ ಕೈಗೊಳ್ಳಲಾಗಿತ್ತು. ಈಗ ಗುತ್ತಿಗೆದಾರರು ಎಲ್ಲಾ ಕಾರ್ಯ ಪೂರ್ಣಗೊಳಿಸಿ, ಪ್ರಾಥಮಿಕ ಕಾಮಗಾರಿಯನ್ನು ಆರಂಭಿಸಿದ್ದಾರೆ. ಯೋಜನೆ ಭಾಗವಾಗಿ 5 ಕಿರು ಸೇತುವೆ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಈಗ ಬ್ಯಾರಿಕೇಡ್ ಹಾಕಲಾಗುತ್ತಿದೆ.
ಡಿಸೆಂಬರ್ 30, 2023ರಲ್ಲಿ ಎಲ್ & ಟಿಗೆ ಕನಕ ಯೋಜನೆ ಟೆಂಡರ್ ನೀಡುವಾಗ 30 ತಿಂಗಳಿನಲ್ಲಿ ಕಾಮಗಾರಿ ಮುಗಿಸಬೇಕು ಎಂದು ಷರತ್ತು ಹಾಕಲಾಗಿದೆ. ಈಗ ಯೋಜನೆಗೆ ಬಂಡಾವಳ ಹೂಡಿಕೆಗೆ ಸಹ ಒಪ್ಪಿಗೆ ನೀಡಿರುವುದರಿಂದ ಯೋಜನೆ ವೇಗವಾಗಿ ಸಾಗುವ ನಿರೀಕ್ಷೆ ಇದೆ.
ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ಮಲ್ಲಿಗೆ, ಕನಕ, ಸಂಪಿಗೆ ಮತ್ತು ಪಾರಿಜಾತ ಎಂದು 4 ಕಾರಿಡಾರ್‌ಗಳಾಗಿ ನಿರ್ಮಾಣ ಮಾಡಲಾಗುತ್ತಿದೆ. ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ವಯಾ ಯಲಹಂಕ 41 ಕಿ. ಮೀ. ಮಾರ್ಗದ ಟೆಂಡರ್ ಅನ್ನು ಮಾದರಿ ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆಯೇ ಅಂತಿಮಗೊಳಿಸಿ ನೀಡಲಾಗುತ್ತದೆ.
ಉಳಿದಂತೆ 3ನೇ ಕಾರಿಡಾರ್ ಆದ 35 ಕಿ. ಮೀ. ಉದ್ದದ ಪಾರಿಜಾತ (ಕೆಂಗೇರಿ-ವೈಟ್‌ಫೀಲ್ಡ್) ಗುತ್ತಿಗೆ ಇನ್ನೆರಡು ತಿಂಗಳಿನಲ್ಲಿ ಅಂತಿಮಗೊಂಡು ನೀಡಲಾಗುತ್ತದೆ. ಆಗ 4 ಕಾಮಗಾರಿಗಳಿಗೆ ಚಾಲನೆ ಸಿಕ್ಕಿದಂತಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವದ ಯೋಜನೆ ಸಬ್ ಅರ್ಬನ್ ರೈಲು, ಎಲ್ಲಾ ಕಾಮಗಾರಿಗಳು ಮುಗಿದು 2026ರಲ್ಲಿ ಉಪ ನಗರ ರೈಲುಗಳ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.












Click it and Unblock the Notifications