Brand Bengaluru: ಕಳೆದ ಬಜೆಟ್‌ನಲ್ಲಿ ಬೆಂಗಳೂರಿಗೆ ಘೋಷಿಸಿದ ಯೋಜನೆಗಳು ಜಾರಿಯಾಗಿದೆಯೇ?
ಸಿಲಿಕಾನ್ ಸಿಟಿಯನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ. ಈ ಪರಿಕಲ್ಪನೆಯಡಿ ಕೆಲ ಅಭಿವೃದ್ಧಿ ಯೋಜನೆಗಳು ಶುರುವಾಗಿವೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೋಗಿ ಬಂದಲ್ಲೆಲ್ಲ ಬ್ರ್ಯಾಂಡ್ ಬೆಂಗಳೂರು ಅಂತಿದ್ದಾರೆ. ಈ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವ್ಯಂಗ್ಯವಾಡಿರುವ ಆರ್.ಅಶೋಕ್, ಕಂಡ ಕಂಡವರ ನಟ್ಟು ಬೋಲ್ಟು ಟೈಟು ಮಾಡುವುದರಲ್ಲೇ ಬ್ಯುಸಿ ಆಗಿರುವ ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಠುಸ್ ಪಟಾಕಿ ಆಗಿದೆ ಎಂದಿದ್ದಾರೆ. ದೇವರೇ ಬಂದರೂ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕೂತಿರುವ ಡಿಸಿಎಂ ಸಾಹೇಬರ ಕಾರ್ಯವೈಖರಿಯಿಂದ, ಕಳೆದ ವರ್ಷದ ಬಜೆಟ್‌ನಲ್ಲಿ ಬೆಂಗಳೂರಿಗೆ ಘೋಷಣೆಯಾದ ಯೋಜನೆಗಳು ಘೋಷಣೆಗಳಾಗಿಯೇ ಉಳಿದಿವೆ ಎಂದು ದೂರಿದ್ದಾರೆ.

ಘೋಷಣೆಯಾದ ಯೋಜನೆಗಳೇನು?: ಕಳೆದ ಬಜೆಟ್‌ನಲ್ಲಿ ಬೆಂಗಳೂರಿಗಾಗಿ 100 ಕೋಟಿ ರೂಪಾಯಿ ವೆಚ್ಚದ ಸ್ವಚ್ಛ ಬೆಂಗಳೂರು ಯೋಜನೆ, 1000 ಕೋಟಿ ರೂಪಾಯಿ ವೆಚ್ಚದ ಘನತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ವಹಣೆ, ಪೌರಕಾರ್ಮಿಕರಿಗೆ ಶರಣೆ ಸತ್ಯಕ್ಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ವಿತರಣೆ, 100 ಕೋಟಿ ವೆಚ್ಚದ ಆರೋಗ್ಯಕರ ಬೆಂಗಳೂರು, ಪ್ರತ್ಯೇಕ ಆರೋಗ್ಯ ಆಯುಕ್ತಾಲಯ, ಆರೋಗ್ಯ ಸಾರಥಿ, ಮನೋಬಿಂಬ ಸಂವಾದ ಯೂಟ್ಯೂಬ್, ಸದೃಢ ಆರೋಗ್ಯ, ಟೆಕ್ ಬೆಂಗಳೂರು, 50 ಹೊಸ ಇಂದಿರಾ ಕ್ಯಾಂಟೀನ್ ಈ ಯೋಜನೆಗಳೆಲ್ಲ ಏನಾಯ್ತು? ಎಂದು ಪ್ರಶ್ನಿಸಿದ್ದಾರೆ.
ಪುರುಸೊತ್ತಿದ್ರೆ ಬೆಂಗಳೂರು ಅಭಿವೃದ್ದಿ ಖಾತೆ ಇಟ್ಟುಕೊಳ್ಳಿ!
ಸ್ವಾಮಿ ಡಿಕೆ ಶಿವಕುಮಾರ್ ಅವರೇ, ನಿಮಗೆ ಕೆಲಸ ಮಾಡಲು ಆಸಕ್ತಿ ಇದ್ದರೆ ಅಥವಾ ಪುರುಸೊತ್ತಿದ್ದರೆ ಮಾತ್ರ ಬೆಂಗಳೂರು ಅಭಿವೃದ್ದಿ ಖಾತೆ ಇಟ್ಟುಕೊಳ್ಳಿ. ಇಲ್ಲವಾದರೆ ದಯವಿಟ್ಟು ಈ ಖಾತೆಯನ್ನು ಯಾರಾದರೂ ಸಮರ್ಥರಿಗೆ ಹಾಗೂ ಆಸಕ್ತಿ ಇದ್ದವರಿಗೆ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ 20 ತಿಂಗಳಲ್ಲಿ ಬೆಂಗಳೂರಿಗೆ ನಿಮ್ಮ ಕೊಡುಗೆ ಏನು ಡಿ.ಕೆ.ಶಿವಕುಮಾರ್ ಅವರೇ? ನಿಮ್ಮ ಸಾಧನೆ ಏನು? ಕೆಲಸ ಮಾತಾಡಬೇಕು. ಬರೀ ಮಾತೇ ಕೆಲಸವಾಗಬಾರದು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಎಂಇಐ ರಸ್ತೆ ಹಾಗೂ ಜಾಲಹಳ್ಳಿ ಟಿವಿಎಸ್ ಕ್ರಾಸ್ ಬಳಿಯ 100 ಅಡಿ ರಿಂಗ್ ರಸ್ತೆ ಹಾಗೂ ನೆಟ್ಕಲಪ್ಪ ಸರ್ಕಲ್ ರಸ್ತೆ ಸೇರಿದಂತೆ ವಿವಿಧೆಡೆ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಪರಿಶೀಲನೆ ನಡೆಸಿದ್ದರು.
ಗಾರ್ಡನ್ ಸಿಟಿ ಸಿಲಿಕಾನ್ ಸಿಟಿ ಬೆಂಗಳೂರನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಡಸ್ಟ್ ಸಿಟಿ ಪಾತ್‌ಹೋಲ್ ಸಿಟಿಯಾಗಿ ಪರಿವರ್ತನೆ ಮಾಡಿ ಇದೇ ಬ್ರ್ಯಾಂಡ್ ಬೆಂಗಳೂರು ಎನ್ನುತ್ತಿದೆ ಎಂದು ಬಿಜೆಪಿ ಕೂಡ ಆರೋಪಿಸಿತ್ತು. ರಾಜಧಾನಿಯ ಯಾವುದೇ ರಸ್ತೆಗಳಲ್ಲಿ ಹೋದರೂ ಯಮರೂಪಿ ಗುಂಡಿಗಳು ವಾಹನ ಸವಾರರ ಜೀವ ತೆಗೆಯಲು ಕಾದು ಕೂತಿವೆ. ಡಿಕೆ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಸವಾರರು ಹೆಲ್ಮೆಟ್ ಹಾಕಿದ್ದರೂ ಮೂಗು ಬಾಯಿ ಮುಚ್ಚಿಕೊಂಡು ಓಡಾಡುವ ದುಸ್ಥಿತಿಯನ್ನು ತಂದಿಟ್ಟಿದೆ ಎಂದು ಟೀಕಿಸಿತ್ತು.












Click it and Unblock the Notifications