Brand Bengaluru: ಬ್ರಾಂಡ್ ಬೆಂಗಳೂರು ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್
ಬೆಂಗಳೂರು, ಮಾರ್ಚ್, 09: ಸಿಎಂ ಸಿದ್ದರಾಮಯ್ಯ ಮಾರ್ಚ್ 7ರಂದು ಮಂಡಿಸಿದ ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಘೋಷಣೆಗಳನ್ನು ಮಾಡಲಾಗಿದೆ. ಅದರಲ್ಲೂ ಬ್ರಾಂಡ್ ಬೆಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ಘೋಷಿಸಲಾಗಿದೆ. ಇದರಿಂದ ನಗರದ ಹಲವು ಅಭಿವೃದ್ಧಿ ಯೋಜನೆಗಳಿಗೆ ತುಂಬಾ ಸಹಕಾರಿ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬ್ರಾಂಡ್ ಬೆಂಗಳೂರು ವಿಚಾರವಾಗಿ ವಿಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಲೇ ಇವೆ. ಇವರ ಬಳಿ ಹಳವೇ ಎಲ್ಕಾ ಖಾಲಿಯಾಗಿದೆ. ಇನ್ನೇನು ಬ್ರಾಂಡ್ ಬೆಂಗಳೂರು ಮಾಡುತ್ತಾರೆ ಎಂದು ಟೀಕೆ ಮಾಡುತ್ತಲೇ ಬಂದಿದ್ದು, ಇದಕ್ಕೆ ತಕ್ಕ ಉತ್ತರವೆಂಬಂತೆ ಬಜೆಟ್‌ನಲ್ಲಿ ಬ್ರಾಂಡ್ ಬೆಂಗಳೂರಿಗೆ ಅನುದಾನ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನಾಯಕರು ಬಿಜೆಟ್ ನಾಯಕರಿಗೆ ಠಕ್ಕರ್ ಕೊಡುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಗರದ ಸಂಚಾರ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಶಾಶ್ವತ ಪರಿಹಾರ ಕ್ರಮವಾಗಿ ಟನೆಲ್ ರಸ್ತೆ ಯೋಜನೆ ಜಾರಿಯಾಗಲಿದೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಮುಂಬರುವ ಎಲ್ಲಾ ನಮ್ಮ ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ. ವೆಚ್ಚವನ್ನು ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ತಲಾ ಶೇಕಡ 50ರಷ್ಟು ಭರಿಸಲಿವೆ ಎಂದು ಹೇಳಿದರು.
ರಾಜಕಾಲುವೆಗಳ ಬಳಿಯಿರುವ 50 ಅಡಿ ಬಫರ್ ವಲಯದಲ್ಲಿ 300 ಕಿಲೋ ಮೀಟರ್ ಉದ್ದದಷ್ಟು ರಸ್ತೆ ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ 3,000 ಕೋಟಿ ಮೀಸಲು ಇಡಲಾಗಿದೆ. ಬಫರ್ ರಸ್ತೆ, ಮೇಲ್ಸೇತುವೆ, ಟನೆಲ್ ರೋಡ್ ಯೋಜನೆಗಳ ಸಾಕಾರದಿಂದ ಬೆಂಗಳೂರಿನಲ್ಲಿ ಸುಮಾರು 700-800 ಕಿಲೋ ಮೀಟರ್ ಉದ್ದದಷ್ಟು ಹೊಸ ರಸ್ತೆಗಳು ನಿರ್ಮಾಣ ಆಗಲಿವೆ. ಜನರ ಸಮಸ್ಯೆ ಪರಿಹಾರಕ್ಕೆ ಸಾಲ ತಂದಾದರೂ ಕೂಡ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಲಿದೆ ಎಂದು ಹೇಳಿದರು.
ವಿವಿಗೆ ಮನಮೋಹನ್ ಸಿಂಗ್ ಹೆಸರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಾಮಕಾರಣ ಮಾಡುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬಿಜೆಪಿ ಅವರು ಯೋಜನೆಗಳಿಗೆ ದೀನದಯಾಳ್ ಹೆಸರಿಟ್ಟರು. ಆಗ ನಾವು ವಿರೋಧಿಸಲಿಲ್ಲ. ಈಗ ಏಕೆ ವಿರೋಧ ಎಂದು ಆಕ್ರೋಶ ಹೊರಹಾಕಿದರು.
ಡಾ.ಮನಮೋಹನ್ ಸಿಂಗ್ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೋಗುವ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಹಾಗೂ ನೆಲಮಂಗಲ ಮೇಲ್ಸೇತುವೆ, ಜೆಎನ್ ನರ್ಮ್ ಯೋಜನೆ, ನರೇಗಾ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ ಹೀಗೆ ಹಲವು ಯೋಜನೆ ಜಾರಿಗೊಳಿಸಿದರು ಎಂದರು.
ಇನ್ನು ಬಿಜೆಪಿ ಅವರು ಅಂತಹ ಯಾವುದಾದರೂ ಒಂದು ಯೋಜನೆಯನ್ನು ಜಾರಿ ಮಾಡಿದ್ದಾರೆಯೇ? ದೇಶ ಹಾಗೂ ಕರ್ನಾಟಕಕ್ಕೆ ಮನಮೋಹನ್ ಸಿಂಗ್ ಅವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿದರೆ, ಅವರಿಗೆ ಮತ್ತಷ್ಟು ಮಾನ್ಯತೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.












Click it and Unblock the Notifications