Brand Benglauru: ಸ್ಥಳೀಯರ ನಿರೀಕ್ಷೆಗೆ ತಕ್ಕಂತೆ ಬೆಂಗಳೂರು ಅಭಿವೃದ್ಧಿ ನೀಲನಕ್ಷೆ: ಡಿಕೆಶಿ
ಬೆಂಗಳೂರು, ಅಕ್ಟೋಬರ್ 09: ಬ್ರ್ಯಾಂಡ್ ಬೆಂಗಳೂರು (Brand Benglauru) ಉಪಕ್ರಮದಡಿ ರಾಜಧಾನಿಯ ಅಭಿವೃದ್ಧಿ ಬಗ್ಗೆ ಸ್ಥಳೀಯ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ತಿಳಿಸಿದರು.
ಸೋಮವಾರ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ 'ಬ್ರ್ಯಾಂಡ್ ಬೆಂಗಳೂರು ಚಿಂತನ ಮಂಥನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಂಗಳೂರಿಗೆ ಅಂಟಿರುವ ಗಾರ್ಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ನಾವು ತೊಡೆದು ಹಾಕಲಿದ್ದೇವೆ.

ಬೆಂಗಳೂರಿನ ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಜನರಿಗೆ ಮಾಹಿತಿ ನೀಡಿ ಪಾರದರ್ಶಕತೆ ಒದಗಿಸಲಾಗುವುದು ಎಂದರು.
ವಾರ್ಡ್‌ಗಳ ಉದ್ಯಾನ ಸ್ಥಳೀಯರ ವ್ಯಾಪ್ತಿಗೆ ನೀಡಲು ಚರ್ಚೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಚುನಾವಣೆಗೆ 225 ವಾರ್ಡ ಮಾಡಲಾಗಿದೆ. ವಾರ್ಡ್ ಸಮಿತಿ ಇಲ್ಲದ ಕಾರಣ ಜನರು ಕೆಲವು ಸಲಹೆ ನೀಡಿದ್ದಾರೆ. ಉದ್ಯಾನ, ಆಟದ ಮೈದಾನಗಳ ಮೇಲುಸ್ತುವಾರಿಯನ್ನು ಸ್ಥಳೀಯರಿಗೆ ನೀಡಿ ಎಂದು ಕೋರಿದ್ದಾರೆ. ಈ ಕುರಿತು ನಾನು ಎಲ್ಲ ಶಾಸಕರ ಜೊತೆ ಚರ್ಚಿಸುತ್ತೇನೆ. ಇದರಲ್ಲಿ ಯಾವುದೇ ಪಕ್ಷದವರು ಸದಸ್ಯರಿಲ್ಲದ ನಾಗರಿಕ ಸಮೂಹಕ್ಕೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗಾಗಿ ಹೆಚ್ಚು ಉತ್ಸುಕತೆಯಿಂದ ಈ ಇಲಾಖೆ ವಹಿಸಿಕೊಂಡಿದ್ದೇನೆ.
ನಾನು ಹಾಗೂ ದಿ.ಅನಂತಕುಮಾರ್ ಅವರು ಚರ್ಚೆ ಮಾಡಿ, ಬೇರೆ ಬೇರೆ ಕಡೆ ಹೋಗಿ ಅಧ್ಯಯನ ಮಾಡಿ ನಂತರ ದೆಹಲಿ ಮಾದರಿಯಂತೆ ಮೆಟ್ರೋ ರೈಲು ಜಾರಿಗೆ ತಂದೆವು. ಇಂದು ಕೂಡ ಬೈಯ್ಯಪನಹಳ್ಳಿಯಿಂದ ಕೆ.ಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಮೆಟ್ರೋ ಮಾರ್ಗ ಆರಂಭವಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳನ್ನು ಆಹ್ವಾನಿಸಲು ಕಾಲಾವಕಾಶ ಕೇಳಿದೆವು. ಅವರು ಕಾಲಾವಕಾಶ ಕೇಳಿದ ಕಾರಣ ಇಂದು ಈ ಮಾರ್ಗಗಳ ಉದ್ಘಾಟನೆ ಮಾಡಿದ್ದಾರೆ. ನೀವು ಈ ಮಾರ್ಗಗಳಲ್ಲಿ ಪ್ರಯಾಣ ಮಾಡಬಹುದು ಎಂದು ಹೇಳಿದರು.

ಬ್ರ್ಯಾಂಡ್ ಬೆಂಗಳೂರಿಗಾಗಿ 70,000 ಸಲಹೆ ಸ್ವೀಕಾರ
ಪುಟಾಣಿ ಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವರ್ಗದವರಿಂದ ಬ್ರಾಂಡ್ ಬೆಂಗಳೂರು ಯೋಜನೆಗಾಗಿ ಒಟ್ಟು 70 ಸಾವಿರ ಸಲಹೆಗಳು ಬಂದಿವೆ. ನಾವು ನಮ್ಮದೇ ರೀತಿಯಲ್ಲಿ ಆಲೋಚನೆ ಮಾಡುತ್ತೇವೆ. ಅಧಿಕಾರಿಗಳು ಅವರದೇ ಆದ ರೀತಿ ಯೋಚಿಸುತ್ತಾರೆ. ಯೋಜನೆ ಆರಂಭಿಸುವ ಮುನ್ನ ನಾಗರೀಕರ ಅಭಿಪ್ರಾಯ ಮುಖ್ಯ. ಹೀಗಾಗಿ ನಾವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ.
ಈ ಯೋಜನೆ ವಿಚಾರವಾಗಿ ಪಕ್ಷಬೇಧ ಮರೆತು ಬೆಂಗಳೂರಿನ ಶಾಸಕರು, ಸಂಸದರ ಅಭಿಪ್ರಾಯ, ಹಿರಿಯ ನಾಗರಿಕರು, ಸಂಘ ಸಂಸ್ಥೆಗಳು, ಮಕ್ಕಳು ಸೇರಿದಂತೆ ಅಧಿಕಾರಿಗಳ ಸಭೆ ಮಾಡಿದ್ದೇವೆ. ಜನರ ಅಭಿಪ್ರಾಯ ಕ್ರೂಢೀಕರಿಸಿ ನಂತರ ಬೆಂಗಳೂರನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂದು ರೂಪುರೇಷೆ ರೂಪಿಸಲು ತೀರ್ಮಾನಿಸಿದ್ದೇವೆ ಎಂದು ಅವರು ವಿವರಿಸಿದರು.
ಸಂಗ್ರಹವಾಗುತ್ತಿರುವ ಆಸ್ತಿ ತೆರಿಗೆ ಸಾಲುತ್ತಿಲ್ಲ: ಡಿಕೆಶಿ
ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಳ್ಳಬೇಕು. ಈಗ ಕೇವಲ 3 ಸಾವಿರ ಕೋಟಿ ಮಾತ್ರ ಆಸ್ತಿ ತೆರಿಗೆ ಬರುತ್ತಿದೆ. ಇದು ನಮಗೆ ನಾಚಿಕೆ ತರುವ ವಿಚಾರ. ಈಗ ಬರುತ್ತಿರುವ ಆಸ್ತಿ ತೆರಿಗೆ ಯಾವುದಕ್ಕೂ ಸಾಲುವುದಿಲ್ಲ. ಈ ವ್ಯವಸ್ಥೆಯಲ್ಲಿ ಸಂಪನ್ಮೂಲ ಸೋರಿಕೆ ಆಗುತ್ತಿದೆ. ಇದನ್ನು ಸರಿಪಡಿಸಲು ಮುಂದಾಗಿದ್ದೇವೆ. ಯಾರೂ ಕೂಡ ಹೆಚ್ಚಿನ ತೆರಿಗೆ ಕಟ್ಟುವಂತಿಲ್ಲ. ತಮ್ಮ ಆಸ್ತಿಗೆ ತಕ್ಕಂತೆ ಪ್ರಾಮಾಣಿಕತೆಯಿಂದ ತೆರಿಗೆ ಪಾವತಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು.

ಬೆಂಗಳೂರಿನಲ್ಲಿ ಮಳೆನೀರು ಹರಿಯದೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೆಂಗಳೂರಿನ ಬಗ್ಗೆ ಬಹಳ ಟೀಕೆ ಮಾಡಲಾಗುತ್ತಿತ್ತು. ಸಂಚಾರದಟ್ಟಣೆ ವಿಚಾರದಲ್ಲೂ ಬೇರೆ ನಗರಗಳಿಗಿಂತ ಬೆಂಗಳೂರಿನ ಮೇಲೆ ಕಳಂಕ ಹೊರಿಸಲಾಗಿದೆ.
ಕಸ ವಿಲೇವಾರಿಗೆ ದೆಹಲಿ, ಚೆನ್ನೈ ಮಾದರಿ ಅಳವಡಿಕೆ?
ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ವಿವಿಧ ಸಮುದಾಯಗಳ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಅಡಿಪಾಯ ಹಾಕಿಕೊಟ್ಟಿದ್ದರು. ಬೆಂಗಳೂರಿನಲ್ಲಿರುವ ಇಸ್ರೋ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್, ಹೆಚ್ ಎಎಲ್, ಹೆಚ್ಎಂಟಿ, ಕಾನೂನು ಕಾಲೇಜು ಸೇರಿದಂತೆ ಅನೇಕ ಮಹತ್ತರ ಸಂಸ್ಥೆಗಳು ಇವೆ. ಇದೆಲ್ಲ ಸೇರಿ ನಗರ ರಕ್ಷಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.
ನಾನು ಅಧಿಕಾರಕ್ಕೆ ಬಂದ ನಂತರ ಮಳೆ ನೀರು ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಎಂಟು ಕಡೆ ಕಸದಿಂದ ಇಂಧನ ಉತ್ಪಾದನೆ ಕೇಂದ್ರ ಆರಂಭಿಸಿದ್ದು ಯಾವುದೂ ಚಾಲ್ತಿಯಲ್ಲಿ ಇಲ್ಲ. ಕಸ ವಿಲೇವಾರಿ ಶಾಶ್ವತ ಪರಿಹಾರಕ್ಕಾಗಿ ಹೈದರಾಬಾದ್, ದೆಹಲಿ, ಚೆನ್ನೈನಲ್ಲಿ ಮಾದರಿಯನ್ನು ಗಮನಿಸಿದ್ದೇವೆ.
ಸಂಚಾರ ನಿಯಂತ್ರಣಕ್ಕೆ ಮೇಲ್ಸೇತುವೆ, ಟನಲ್ ನಿರ್ಮಾಣ
ಸಂಚಾರ ದಟ್ಟಣೆ ಕಡಿಮೆ ಮಾಡಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಯೋಜಿತ ನಗರ ಅಲ್ಲ. ಇರುವ ನಗರವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಮಾಡಲಾಗುವುದು. ಮೆಟ್ರೋ ಬಂದ ನಂತರ ಸ್ವಲ್ಪ ಹೆಚ್ಚು ಓಡಾಟ ಆಗಿದೆ. ಮಹಿಳೆಯರಿಗೆ ನಾವು ಉಚಿತ ಬಸ್ ಪ್ರಯಾಣ ಮಾಡಿದ ನಂತರ ಬಸ್ ನಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೇಲ್ಸೇತುವೆ ಯೋಜನೆ ಮಾಡಿದ್ದೇವೆ.
ಈಗ ಟನಲ್ ರಸ್ತೆ ಮಾಡಲು ಮುಂದಾಗಿದ್ದು, 8 ಕಂಪನಿಗಳು ಈ ಯೋಜನೆ ಮಾಡಲು ಅರ್ಹತೆ ಪಡೆದಿದ್ದಾರೆ. ಮುಂದಿನ 45 ದಿನಗಳಲ್ಲಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಯೋಜನೆ ಜಾರಿ ಮಾಡುತ್ತೇವೆ ಎಂದರು.
ರಸ್ತೆ ಗುಂಡಿ ವಿಚಾರದಲ್ಲಿ ಸಂಚಾರಿ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಜತೆಗೂಡಿ ಕೆಲಸ ಮಾಡಲಿದ್ದೇವೆ.
ಜನ ಟ್ರಾಫಿಕ್ ನಲ್ಲಿ ಜನ ಕಾಲ ಕಳೆಯುವಂತೆ ಆಗಿದೆ. ಅದನ್ನು ತಪ್ಪಿಸಲು ಎಲ್ಲಾ ಶಾಸಕರು ಪಕ್ಷಾತೀತವಾಗಿ ಬೆಂಬಲ ನೀಡಬೇಕು. ಈ ಎಲ್ಲಾ ಬದಲಾವಣೆಗಳನ್ನು ಒಂದೇ ದಿನದಲ್ಲಿ ಮಾಡಲು ಸಾಧ್ಯವಿಲ್ಲ, ಇದಕ್ಕೆ ಎಲ್ಲಾ ನಾಗರೀಕರ ಸಹಕಾರ ಮುಖ್ಯ. ನಮ್ಮ ಕೆಲಸಕ್ಕೆ ಬೆಂಬಲ ನೀಡಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ನಮ್ಮ ಶಕ್ತಿ ಹೆಚ್ಚಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications