Bommanahalli Congress Ticket: ಬೊಮ್ಮನಹಳ್ಳಿಗೆ ಉಮಾಪತಿ ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿ!
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಪಾಲಾಗಿದೆ. ಬೊಮ್ಮನಹಳ್ಳಿ (Bommanahalli) ಕಾಂಗ್ರೆಸ್ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿತ್ತು. ಹೀಗಾಗಿಯೇ ಟಿಕೆಟ್ ಫೈನಲ್ ಮಾಡುವುದು ಕಾಂಗ್ರೆಸ್ ನಾಯಕರಿಗೆ ಸವಾಲಾಗಿತ್ತು. ಇದೀಗ ನಿರ್ಮಾಪಕ ಉಮಾಪತಿ (Umapathy) ಟಿಕೆಟ್ ಪಡೆದಿದ್ದಾರೆ.
ಬಿಜೆಪಿ ಹಾಲಿ MLA ಶಾಸಕ ಸತೀಶ್ ರೆಡ್ಡಿಗೆ (Sathish Reddy) ಬಿಜೆಪಿ ಮೊದಲ ಪಟ್ಟಿಯಲ್ಲೇ ಟಿಕೆಟ್ ಕನ್ಫರ್ಮ್ ಆಗಿತ್ತು. ಹೀಗಾಗಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಈ ಮೂಲಕ ಸತತ 4ನೇ ಬಾರಿಗೆ ಆಯ್ಕೆಯಾಗುವ ನಿರೀಕ್ಷೆ ಬಿಜೆಪಿ ಶಾಸಕರದ್ದಾಗಿತ್ತು. ಈಗ ಮತ್ತೊಂದು ಕಡೆ 3ನೇ ಪಟ್ಟಿಯಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ರಂಗೇರಿದ್ದು, ಗೆಲುವು ಯಾರ ಪಾಲಿಗೆ ಎಂಬುದನ್ನ ಮತದಾರ ಪ್ರಭು ನಿರ್ಧಾರ ಮಾಡಲಿದ್ದಾನೆ. ಅದಕ್ಕೂ ಮುನ್ನ ಬೊಮ್ಮನಹಳ್ಳಿ ಕ್ಷೇತ್ರ ರಣಕಣವಾಗಿ ಮಾರ್ಪಡುವುದು ಪಕ್ಕಾ.

ಕಾರ್ಮಿಕರ ಕ್ಷೇತ್ರ ಬೊಮ್ಮನಹಳ್ಳಿ
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಹತ್ತಾರು ಗಾರ್ಮೆಂಟ್ಸ್ ತಲೆ ಎತ್ತಿವೆ. ಇಲ್ಲಿ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹೊರ ರಾಜ್ಯದಿಂದ ಬಂದು ಬದುಕು ಕಟ್ಟಿಕೊಂಡಿರುವ ಕಾರ್ಮಿಕರ ಸಂಖ್ಯೆ ಸಾಕಷ್ಟಿದೆ. ಈ ಎಲ್ಲಾ ಲೆಕ್ಕಾಚಾರಗಳ ಆಧಾರದಲ್ಲೇ ಎಲೆಕ್ಷನ್ ನಡೆಯುತ್ತದೆ. 2018ರ ಚುನಾವಣೆಯಲ್ಲಿ ಸತೀಶ್ ರೆಡ್ಡಿ ಬಿಜೆಪಿಯಿಂದ ಸತತ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸುಷ್ಮಾ ರಾಜಗೋಪಾಲ ರೆಡ್ಡಿ ವಿರುದ್ಧ 47,162 ಮತಗಳ ಅಂತರದಲ್ಲಿ ಗೆದ್ದರು. ಒಟ್ಟು 1,11,863 ಮತ ಪಡೆಯುವ ಮೂಲಕ ಸತೀಶ್ ರೆಡ್ಡಿ ಗೆದ್ದಿದ್ದರು.
ಬೊಮ್ಮನಹಳ್ಳಿ ಬಿಜೆಪಿ ಭದ್ರಕೋಟೆ
ಬೊಮ್ಮನಹಳ್ಳಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಿಕೊಂಡಿದೆ. 2008ರಲ್ಲಿ ವಿಧಾನಸಭಾ ಕ್ಷೇತ್ರದ ಸ್ಥಾನಮಾನ ಪಡೆದ ನಂತರ ಬಿಜೆಪಿ ಪಕ್ಷದ ಭದ್ರಕೋಟೆ ಎಂದೇ ಕರೆಯಲ್ಪಡುತ್ತಿದೆ ಬೊಮ್ಮನಹಳ್ಳಿ. ಇದಕ್ಕೂ ಮೊದಲು ಕೂಡ ಈ ಭಾಗದಲ್ಲಿ ಬಿಜೆಪಿ ಬಲವಾದ ವೋಟ್ ಬ್ಯಾಂಕ್ ಹೊಂದಿತ್ತು. ಆದರೆ ಈ ಬಾರಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವ ನಿರೀಕ್ಷೆ ಸ್ಥಳೀಯ ಕಾಂಗ್ರೆಸ್ ನಾಯಕರದ್ದು. ಮೊದಲಿನಿಂದಲೂ ಈ ಕ್ಷೇತ್ರ ಚುನಾವಣೆ ವೇಳೆ ಸಾಕಷ್ಟು ಸದ್ದು ಮಾಡುತ್ತದೆ. ಈ ಬಾರಿ ಕೂಡ ಅಂತಹದ್ದೇ ಪೈಪೋಟಿ ನಿರೀಕ್ಷಿಸಬಹುದು.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಅಂದಹಾಗೆ ಉಮಾಪತಿ ಶ್ರೀನಿವಾಸ್ ಬೊಮ್ಮನಹಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾಗ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಟಿಕೆಟ್ ಘೋಷಣೆಗೂ ಮೊದಲೇ ಉಮಾಪತಿ ಶ್ರೀನಿವಾಸ್ ಜೊತೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ್ದರು. ಈ ಮೊದಲು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಟಿ. ವಾಸುದೇವ ರೆಡ್ಡಿ ಕೂಡ ಉಮಾಪತಿ ಶ್ರೀನಿವಾಸ್ ಚುನಾವಣಾ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ. ಈ ಮೂಲಕ ಪ್ರಸಕ್ತ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು.
ಸೋಮವಾರ ಸತೀಶ್ ರೆಡ್ಡಿ ನಾಮಪತ್ರ
ಇನ್ನೊಂದು ಕಡೆ ಹಾಲಿ ಶಾಸಕ ಸತೀಶ್ ರೆಡ್ಡಿ ಸೋಮವಾರ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಬೆಂಬಲಿಗರ ಜನಸ್ತೋಮ ಸೋಮವಾರ ಬೊಮ್ಮನಹಳ್ಳಿಯಲ್ಲಿ ನೆರೆಯುವುದು ಪಕ್ಕಾ. ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ತಮ್ಮ ನಾಮಪತ್ರ ಸಲ್ಲಿಕೆ ದಿನಾಂಕವನ್ನು ಫೈನಲ್ ಮಾಡಿಲ್ಲ. ಇಷ್ಟೆಲ್ಲದರ ನಡುವೆ ಬೊಮ್ಮನಹಳ್ಳಿ ಅಖಾಡಕ್ಕೆ ಸಿನಿಮಾ ತಾರೆಯರ ದಂಡು ಭಾರಿ ಪ್ರಮಾಣದಲ್ಲಿ ನಿರೀಕ್ಷೆ ದಟ್ಟವಾಗಿದೆ. ಹೀಗಾಗಿ ಬೊಮ್ಮನಹಳ್ಳಿ ಕ್ಷೇತ್ರ ರಂಗೇರುವುದರಲ್ಲಿ ಅನುಮಾನವಿಲ್ಲ.
ಒಟ್ನಲ್ಲಿ ಬಿಜೆಪಿ ಮತ್ತೊಮ್ಮೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಜ್ಜಾಗಿದೆ. ಆದರೆ ಕಾಂಗ್ರೆಸ್ ಮೊಟ್ಟ ಮೊದಲ ಬಾರಿಗೆ ತನ್ನ ಬಾವುಟ ಹಾರಿಸಲು ಕಾಯುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎತ್ತ ಸಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಹೆಸರು ಕೂಡ ಫೈನಲ್ ಆಗಿರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರಿಗೂ ಹೊಸ ಹುರುಪು ತಂದಂತಾಗಿದೆ.












Click it and Unblock the Notifications