Namma Metro Pink Line: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಹೊಸ ಮೆಟ್ರೋ ಫೀಡರ್ ಬಸ್ ಘೋಷಿಸಿದ BMTC
ಬೆಂಗಳೂರು: ಲೋಕಾರ್ಪಣೆಗೆ ಸಜ್ಜಾಗಿರುವ ಗುಲಾಬಿ ಮೆಟ್ರೋ ಮಾರ್ಗದಲ್ಲಿ ವಾಣಿಜ್ಯ ಸೇವೆಗೆ ದಿನಗಣನೇ ಆರಂಭವಾಗಿದೆ. ಇದರ ನಡುವೆ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಹ ಸಿಕ್ಕಿದೆ. ನೂತನ ಪಿಂಕ್ ಲೈನ್‌ನ ಆರು ನಿಲ್ದಾಣಗಳಿಂದ ಮೊದಲು-ಕೊನೆ ಮೈಲಿ ಸಂಪರ್ಕ ಸಾಧಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರತ್ಯೇಕ 7 ಮೀಟರ್ ಉದ್ದದ ಮೆಟ್ರೋ ಫೀಡರ್ ಬಸ್ ಸೇವೆ ಆರಂಭಿಸಲು ಮುಂದಾಗಿದೆ. ಯಾವ ಮಾರ್ಗಗಳಲ್ಲಿ, ಎಲ್ಲಿಂದ-ಎಲ್ಲಿಗೆ ಬಸ್ ಓಡಾಡಲಿವೆ? ಇಲ್ಲಿದೆ ಮಾಹಿತಿ.
ಇದೇ ತಿಂಗಳಾಂತ್ಯಕ್ಕೆ ಉದ್ಘಾಟನೆ ಆಗಲಿರುವ 'ಮೆಟ್ರೋ ಗುಲಾಬಿ' (Pink Line) ಮಾಗದಲ್ಲಿ ಓಡಾಡುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ನಿಲ್ದಾಣದಿಂದ ದೂರದ ಗಮ್ಯಸ್ಥಾನ ವರೆಗೆ ಸಾರಿಗೆ ಸಂಪರ್ಕ ಸುಧಾರಿಸಲು, ಮೆಟ್ರೋ ಸಾರಿಗೆ ಬಳಕೆ ಹೆಚ್ಚಿಸಲು ಮೆಟ್ರೋ ಫೀಡರ್ ಬಸ್‌ಗಳನ್ನು ಕಾರ್ಯಾಚರಣೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ರೂಟ್‌ಗಳನ್ನು ಪ್ರಸ್ತಾಪಿಸಿದೆ.

7 ಮೀಟರ್ ಕಾಂಪ್ಯಾಕ್ಟ್ ಬಸ್‌ಗಳ ಸಂಚಾರ
7.5 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ ವ್ಯಾಪ್ತಿಯ ಆರು ನಿಲ್ದಾಣಗಳಿಂದ ಒಟ್ಟು 30 ಬಸ್‌ಗಳು ಸಂಚಾರ ಮಾಡಲಿವೆ. 07 ಮೀಟರ್ ಉದ್ದ ಕಾಂಪ್ಯಾಕ್ಟ್ ಬಸ್‌ಗಳು ಇವಾಗಿದ್ದು, 05 ಮಾರ್ಗಗಳಲ್ಲಿ ಸಂಚಾರ ಸೇವೆ ನೀಡಲಿವೆ. ಪ್ರತಿ ನಿತ್ಯ 415 ಟ್ರಿಪ್ ಸೇವೆ ನೀಡುವ ಸಾಧ್ಯತೆ ಇದೆ. ಪ್ರತಿ 10 ನಿಷಕ್ಕೆ ಒಂದರಂತೆ ಸಂಚಾರ ಮಾಡಲಿವೆ ಎಂದು ಬಿಎಂಟಿಸಿ ಮೂಲಗಳು ಖಚಿತಪಡಿಸಿವೆ.
ಜನವಸತಿ ಪ್ರದೇಶ, ಕೈಗಾರಿಕೆ ಪ್ರದೇಶ, ಇನ್ನಿತರ ದೂರದ ಸ್ಥಳದಿಂದ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುತ್ತವೆ. ಇದರಿಂದ ಜನ ಮೆಟ್ರೋ, ಬಿಎಂಟಿಸಿ ಬಳಕೆ ಹೆಚ್ಚಾಗಲಿದೆ. ಮೆಟ್ರೋ ಫೀಡರ್ ಅಲ್ಲದ ಬಸ್‌ಗಳಿಂದಲೂ ಜನರು ಆಗಮಿಸುತ್ತಾರೆ. ಅದರೊಂದಿಗೆ ಈ ಬಸ್‌ಗಳು ಸೇವೆ ನೀಡಲಿವೆ.
ಯಾವ 5 ರೂಟ್‌ನಲ್ಲಿ ಬಸ್ ಸಂಚರಿಸಲಿವೆ?
* 'MF-18 J' ಮಾರ್ಗ: ಈ ರೂಟ್ ನ ಬಸ್ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವನ್ನು ಉತ್ತರಹಳ್ಳಿ ಕಡೆಗೆ ಓಡಾಡುತ್ತದೆ
* MF-18 JT ಮಾರ್ಗದ ಬಸ್ ನಿತ್ಯವು ಜಯದೇವ ಆಸ್ಪತ್ರೆಯನ್ನು ತಾವರೆಕೆರೆ ಮೆಟ್ರೋ ನಿಲ್ದಾಣ ಮಧ್ಯೆ ಸೇತುವೆಯಾಗಲಿದೆ.
* MF-18 JP ಈ ಮಾರ್ಗದ ಬಸ್ IIMB ಮೆಟ್ರೋ ನಿಲ್ದಾಣದ ಮೂಲಕ 'ರಿಂಗ್ ರಸ್ತೆ' (ವೃತ್ತಾಕಾರದ ಮಾರ್ಗ) ಆಗಿ ಕಾರ್ಯ ನಿರ್ವಹಿಸುತ್ತದೆ.
* MF-22 HS ಮಾರ್ಗದ ಬಸ್ ಹುಲಿಮಾವು ಮೆಟ್ರೋ ನಿಲ್ದಾಣದಿಂದ ಸಿಂಗಸಂದ್ರವರೆಗೆ ಸಂಚಾರ ಮಾಡುತ್ತದೆ.
* MF-18 T ರೂಟ್ ಬಸ್ ತಾವರೆಕೆರೆ ಮೆಟ್ರೋ ನಿಲ್ದಾಣ, ಜಯನಗರ ಮತ್ತು ಬನಶಂಕರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚರಿಸುವವರಿಗೆ ಸೇವೆ ನೀಡುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಈ ಬಸ್‌ಗಳು ಸಣ್ಣ ರಸ್ತೆಯಲ್ಲಿ ಸರಾಗವಾಗಿ ಸಾಗಲಿವೆ. ಬೀದಿ, ಬಡಾವಣೆಗಳಿಂದ ಜನರನ್ನು ಮೆಟ್ರೋ ನಿಲ್ದಾಣಕ್ಕೆ ಕರೆ ತರಲಿವೆ. ಪ್ರಮುಖ ಮತ್ತು ಪ್ರಮುಖ ಅಲ್ಲದ ರಸ್ತೆಗಳಿಂದ ದೂರ ವಾಸಿಸುವ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿವೆ.
ಮೆಟ್ರೋ ಫೀಡರ್ 114 ಬಸ್
ಬಿಎಂಟಿಸಿ ಪ್ರಕಾರ, ಈಗಾಗಲೇ ಬನ್ನೇರುಘಟ್ಟ ರಸ್ತೆ, ಆನೇಕಲ್ ಮತ್ತು ಜಿಗಣಿ ರೂಟ್‌ಗಳಲ್ಲಿ 114 ಮೆಟ್ರೋ ಫೀಡರ್ ಬಸ್‌ಗಳು ನಿತ್ಯ 500ಕ್ಕೂ ಅಧಿಕ ಬಾರಿ ಸಂಚಾರ ಸೇವೆ ನೀಡುತ್ತಿವೆ. ಇದೇ ಸೇವೆ ಪಿಂಕ್ ಲೈನ್ ಮೆಟ್ರೋಗೂ ವಿಸ್ತರಣೆ ಆಗಿದೆ.
ರಿಯಲ್ ಟೈಮ್ ಟ್ರ್ಯಾಕಿಂಗ್
ಮೆಟ್ರೋ ಇಳಿಯುತ್ತಿದ್ದಂತೆ ನಿಲ್ದಾಣಗಳಿಂದ ಬಸ್ ಹೊರಡುವ, ಬಸ್ ಆಗಮಿಸುವ ನೈಜ ಸಮಯದ ಮಾಹಿತಿಯನ್ನು ಹಾಲಿ ಇರುವ ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆ ಮೂಲಕ ತಿಳಿಯಬಹುದು. ಈ ಸಂಬಂಧ ಬಿಎಂಟಿಸಿ ಹಾಗೂ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬಸ್, ನಿಲ್ದಾಣಗಳ ಮಾಹಿತಿಯನ್ನು ಸಂಯೋಜಿಸಲು ಮುಂದಾಗಿದೆ. ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಆಧಾರಿತ ಡೇಟಾ ಹಂಚಿಕೆ ಮಾಡಲಾಗುತ್ತಿದೆ. ಮೆಟ್ರೋ ಆರಂಭವಾಗುತ್ತಿದ್ದಂತೆ ಫೀಡರ್ ಬಸ್‌ಗಳು ಸೇವೆ ಸಿಗಲಿವೆ.
ಬಿಎಂಟಿಸಿ, ಮೆಟ್ರೋಗೆ ಒಂದೇ ಕಾರ್ಡ್ ಬಳಿಸಿ
ಸಾರ್ವಜನಿಕ ಸಾರಿಗೆ ಉತ್ತೇಜನಕ್ಕಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಬಳಕೆಗೆ ಅವಕಾಶ ಇದೆ. ಈ ಒಂದೆ ಕಾರ್ಡ್‌ನ್ನು ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರಕ್ಕೂ ಬಳಸಬಹುದಾಗಿದೆ.
253 ಮೆಟ್ರೋ ಫೀಡರ್ ಬಸ್ ಸಂಚಾರ
ಸಾಮಾನ್ಯ ಮಾರ್ಗದ ಬಿಎಂಟಿಸಿ ಬಸ್ ಹೊರತಾಗಿ ನಮ್ಮ 'ಮೆಟ್ರೋ ಹಸಿರು, ನೇರಳೆ ಮತ್ತು ಹಳದಿ' ಮಾರ್ಗದಲ್ಲಿ 253 ಮೆಟ್ರೋ ಫೀಡರ್ ಬಸ್‌ಗಳು ನಿತ್ಯ 71ಮಾರ್ಗಗಳಲ್ಲಿ ಸಂಚಾರ ನಡೆಸುತ್ತಿವೆ. ನಿತ್ಯ 3100 ಟ್ರಿಪ್‌ಗಳ ಮೂಲಕ 40,000ಕ್ಕೂ ಅಧಿಕ ಕಿಲೋ ಮೀಟರ್ ಸಂಚಾರ ನಡೆಸುತ್ತಿವೆ.


Click it and Unblock the Notifications
