ಬಿಎಂಟಿಸಿ ಪ್ರಯಾಣ ಮಾಹಿತಿಗೆ ಕಿಯೋಸ್ಕ್
ಬೆಂಗಳೂರು, ಫೆ.8: ಪ್ರಯಾಣಿಕರಿಗೆ ಸಮಗ್ರ ಮಾಹಿತಿ ಒದಗಿಸುವ ಗಣಕಯಂತ್ರ ಆಧಾರಿತ ಟಚ್ ಸ್ಕ್ರೀನ್ ಕಿಯೋಸ್ಕ್ ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಕೆಂಪೇಗೌಡ ನಿಲ್ದಾಣದಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು. ಮಾಹಿತಿ ಯಂತ್ರಗಳನ್ನು ಅಳವಡಿಸಿಕೊಂಡಿರುವ ಮೊದಲ ಸಾರಿಗೆ ಸಂಸ್ಥೆ ಎಂಬ ಗೌರವಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾತ್ರವಾಗಿದೆ.
ಕೆಂಪೇಗೌಡ ನಿಲ್ದಾಣ, ಶಿವಾಜಿನಗರ ಸೇರಿದಂತೆ 52 ಬಸ್ ನಿಲ್ದಾಣಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು. ಪ್ರತಿ ಕಿಯೋಸ್ಕ್ ಗೆ 1.20 ಲಕ್ಷ ರೂ. ವೆಚ್ಚವಾಗಲಿದ್ದು, 3 ವರ್ಷಗಳ ಕಾಲ ಕಂಪೆನಿಯೇ ನಿರ್ವಹಣೆ ಮಾಡಲಿದೆ. ಇದರಿಂದ 6 ಸಾವಿರ ಬಸ್ ಗಳ 52 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆಯಿದ್ದು, ಬಸ್ ಗಳು ಹೊರಡುವ ಸಮಯ, ಹಾದು ಹೋಗುವ ಮಾರ್ಗ, ಸೇರುವ ಸಮಯದ ಮಾಹಿತಿಯನ್ನು ನೀಡಲಿದೆ ಎಂದು ಹೇಳಿದರು.
ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವ ಮಾಹಿತಿ, ಮಾರ್ಗಗಳ ನಕ್ಷೆ, ಬಿಎಂಟಿಸಿ ಬಗ್ಗೆ ಮಾಹಿತಿ, ವಿಮಾನ ನಿಲ್ದಾಣ ಬಸ್ ಸೇವೆ, ಬೆಂಗಳೂರು ರೌಂಡ್ಸ್, ಬಸ್ ಗಳ ಬಾಡಿಗೆ ಪಡೆದ ಮಾಹಿತಿ ಇತ್ಯಾದಿಗಳನ್ನು ಸುಲಭವಾಗಿ ಪಡೆಯಬಹುದು ಎಂದು ಹೇಳಿದರು. ಬಿಎಂಟಿಸಿಯ ಉದ್ಯೋಗಾವಕಾಶ ಟೆಂಡರ್ ಮತ್ತು ಪ್ರಯಾಣಿಕರ ಹಕ್ಕಿನ ಬಗ್ಗೆಯೂ ತಿಳಿದುಕೊಳ್ಳಬಹುದಾಗಿದೆ ಎಂದರು.

ಇದರಿಂದ ಕೆಲಸದ ಒತ್ತಡ ಕಡಿಮೆಯಾಗಲಿದೆ. ದಿನವಿಡೀ ಸೇವೆ ಲಭ್ಯವಾಗುತ್ತದೆ. ಸ್ವಯಂಸೇವೆಗೆ ಪ್ರೋತ್ಸಾಹ, ಸಿಬ್ಬಂದಿ ಪ್ರಮಾಣ ಕಡಿಮೆಗೊಳಿಸಲಾಗುತ್ತದೆ. ಈ ವ್ಯವಸ್ಥೆಯನ್ನು ಚಾಲಕ ಮತ್ತು ನಿರ್ವಾಹಕರಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಈಗಾಗಲೆ 12 ಬಸ್ ನಿಲ್ದಾಣಗಳಲ್ಲಿ ಕಿಯೋಸ್ಕ್ ಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲೇ 40 ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಬಸ್ ನಿಲ್ದಾಣಗಳ ವಿಚಾರಣಾ ಕೊಠಡಿ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆ: ಮುಂದಿನ ಆರ್ಥಿಕ ಸಾಲಿನಲ್ಲಿ ಸಾವಿರ ಬಿಎಂಟಿಸಿ ಬಸ್‌ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಈಗಾಗಲೇ 500 ಬಿಎಂಟಿಸಿ ಬಸ್ ಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದ ಆರು ಸಾವಿರ ಬಸ್ ಗಳಿಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ 300 ವೋಲ್ವೋ ಬಸ್ ಗಳನ್ನು ಒದಗಿಸುವುದಾಗಿ ತಿಳಿಸಿದ್ದು, ವೋಲ್ವೋ ಬಸ್ ಬದಲಾಗಿ ಸಾಮಾನ್ಯ ಬಸ್‌ಗಳನ್ನೇ ನೀಡಿ ಎಂದು ತಿಳಿಸಲಾಗಿದೆ ಎಂದರು.
ಬಿಎಂಟಿಸಿ ನಷ್ಟ: ಬಿಎಂಟಿಸಿ ನಷ್ಟ ಕಡಿಮೆಯಾಗುತ್ತಿದ್ದು, ವರ್ಷಾಂತ್ಯಕ್ಕೆ ಲಾಭ ಪಡೆಯುವ ನಿರೀಕ್ಷೆಯಿದೆ ಎಂದರು. ಮಾರ್ಚ್ ಒಳಗೆ ಬೆಂಗಳೂರಿನ ರಸ್ತೆ ಸಮಸ್ಯೆಗಳು ಪೂರ್ಣಗೊಳ್ಳಲಿದೆ. ಈಗಾಗಲೇ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಪ್ರಾರಂಭವಾಗಿದೆ. ಗುತ್ತಿಗೆದಾರರಿಗೆ ಫೆಬ್ರವರಿ ಒಳಗೆ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದ್ದು, ಮಾರ್ಚ್ ಒಳಗೆ ನಗರದ ರಸ್ತೆಗಳು ದುರಸ್ತಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ಉಪಮೇಯರ್ ಇಂದಿರಾ, ಸಚಿವ ದಿನೇಶ್ ಗುಂಡೂರಾವ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications