ಬಿಎಂಟಿಸಿಯಿಂದ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರವಸೆ: ಜ್ಞಾನಭಾರತಿ ವಿದ್ಯಾರ್ಥಿಗಳ ಪ್ರತಿಭಟನೆ ವಾಪಸ್
ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಗೆ ಬಸ್ ಅಪಘಾತ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಸಂತ್ರಸ್ತೆಗೆ ಸರ್ಕಾರಿ ಉದ್ಯೋಗ, ಪರಿಹಾರ ಕುರಿತು ಭರವಸೆ ನೀಡಿದ್ದರಿಂದ ಮೂರು ದಿನದ ಪ್ರತಿಭಟನೆಯನ್ನು ವಿದ್ಯಾರ್ಥಿಗಳು ಹಿಂಪಡೆದಿದ್ದಾರೆ.
ಪ್ರಕರಣ ಕುರಿತು ಬುಧವಾರ ಸಂಜೆ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ಉಪಕುಲಪತಿ ಎಸ್.ಎನ್.ಜಯಕರ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ನಂತರ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ಲೋಕೇಶ್, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದರು.
ಪ್ರತ್ಯೇಕ ರಸ್ತೆ ನಿರ್ಮಾಣ ಬದಲಾಗಿ ಜ್ಞಾನಭಾರತಿ ಆವರಣದ ರಸ್ತೆಯಲ್ಲಿ ಸಂಚಾರ ನಿಯಮ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಸಂತ್ರಸ್ತೆಗೆ ಇಲ್ಲವೇ ಅವರ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ವಿಶ್ವವಿದ್ಯಾಲಯ ಜತೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು. ಸದ್ಯ ಸಂತ್ರಸ್ತೆಗೆ ವಿಮೆ ಹಣವನ್ನು ಹಾಗೂ ಚಿಕಿತ್ಸಾ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ ಎಂದು ಸರ್ಕಾರದ ಪರ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಶಿಲ್ಪಶ್ರೀ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

ಜ್ಞಾನಭಾರತಿ ರಸ್ತೆಗೆ 28 ಹಂಪ್, 150 ಬ್ಯಾರಿಕೇಡ್
ಮೈಸೂರು ರಸ್ತೆಯಿಂದ ಮಲ್ಲತ್ತಹಳ್ಳಿ ಮುಖ್ಯ ರಸ್ತೆಗೆ ಸಂಪರ್ಕಿಸುವ ಈ ರಸ್ತೆಯು ಜ್ಞಾನಭಾರತಿ ಆವರಣದಲ್ಲಿ ಹಾದು ಹೋಗುತ್ತದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜ್ಞಾನಭಾರತಿ ಆವರಣ ಬಿಟ್ಟು ಪ್ರತ್ಯೇಕ ಕಡೆ ರಸ್ತೆ ನಿರ್ಮಿಸಿ ಎಂದು 12ವರ್ಷದಿಂದ ಬೇಡಿಕೆ ಇತ್ತು. ಈ ವಿಷಯ ಕೂಡ ಸಭೆ ಚರ್ಚೆಯಾಗಿದ್ದು, ಸರ್ಕಾರ ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಒಪ್ಪಿಲ್ಲ. ಬದಲಾಗಿ ಇರುವ ರಸ್ತೆಗೆ 28ಕಡೆಗಳಲ್ಲಿ ಹಂಪ್ ಹಾಕಲು, 150 ಬ್ಯಾರಿಕೇಡ್ ಅಳವಡಿಸುವುದಾಗಿ ಭರವಸೆ ನೀಡಿದೆ.
ಅಲ್ಲದೇ ಅಗತ್ಯವಿರುವ ಕಡೆಗಳಲ್ಲಿ ಕಾಂಪೌಂಡ್ ನಿರ್ಮಾಣದ ಜತೆಗೆ ವೇಗದ ಮೀತಿ, ಕಡ್ಡಾಯ ಹೆಲ್ಮೆಟ್, ಅಡ್ಡಾದಿಡ್ಡಿ ವಾಹನ ಚಾಲನೆ, ಡ್ರಿಂಕ್ ಆಂಡ್ ಡ್ರೈವ್ ಸೇರಿದಂತೆ ಎಲ್ಲ ಸಂಚಾರ ನಿಯಮಗಳನ್ನು ಜ್ಞಾನಭಾರತಿ ಆವರಣ ರಸ್ತೆಯಲ್ಲಿ ಕಡ್ಡಾಯ ಜಾರಿಗೆ ತರುವುದಾಗಿ ಸರ್ಕಾರ ತಿಳಿಸಿದೆ ಎಂದು ಲೋಕೇಶ್ ಹೇಳಿದರು.
ಸಭೆಯಲ್ಲಿ ಉಪಕುಲಪತಿ, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿಶ್ವವಿದ್ಯಾಲಯ ಆಡಳಿತ ಮಂಡಳಿ, ಶಿಕ್ಷಕರ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿ ಸಮೂಹದ ಮುಖಂಡರು, ಬೆಂಗಳೂರು ಪಶ್ಚಿಮ ವಿಭಾಗದ ಕಾನೂನು ಸುವ್ಯವಸ್ಥೆ ಉಪ ಆಯುಕ್ತರು, ಸಂಚಾರಿ ಪೊಲೀಸ್ ಅಧಿಕಾರಿಗಳು, ಬಿಬಿಎಂಪಿಯ ಜಂಟಿ ಆಯುಕ್ತರು, ಬಿಎಂಟಿಸಿ ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications