ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ; ಟೆಂಡರ್ ಆಹ್ವಾನ
ಬೆಂಗಳೂರು, ಜುಲೈ 15 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸೌಕರ್ಯ ಕಲ್ಪಿಸುವ ಯೋಜನೆಗೆ ಚಾಲನೆ ಸಿಕ್ಕಿದೆ. ಬಿಎಂಆರ್‌ಸಿಎಲ್ 38 ಕಿ. ಮೀ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆದಿದೆ.
Recommended Video
ಮಂಗಳವಾರ ಬಿಎಂಆರ್‌ಸಿಎಲ್ ಕೆ. ಆರ್. ಪುರ- ಬೆಂಗಳೂರು ವಿಮಾನ ನಿಲ್ದಾಣ ನಡುವಿನ ನಮ್ಮ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ನಮ್ಮ ಮೆಟ್ರೋ ಫೇಸ್ 2ಬಿ ಯೋಜನೆಯನ್ನು ಈ ಮಾರ್ಗ ನಿರ್ಮಾಣವಾಗಲಿದೆ.
ಈ ಯೋಜನೆಯನ್ನು ಒಟ್ಟು ಮೂರು ಹಂತವಾಗಿ ವಿಭಜನೆ ಮಾಡಲಾಗಿದೆ. ಈ ಮಾರ್ಗವನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈ ಮಾರ್ಗದಲ್ಲಿನ ರೈಲು ಬಳ್ಳಾರಿ ರಸ್ತೆ ಮತ್ತು ಯಲಹಂಕ ಬಳಿ ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಲಿದೆ.
ಈ ಯೋಜನೆಯ ಒಟ್ಟು ಮೊತ್ತ 2,500 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಬಿಎಂಆರ್‌ಸಿಎಲ್ ಈಗಾಗಲೇ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. 167 ಖಾಸಗಿ, 46 ಸರ್ಕಾರಿ ಆಸ್ತಿಗಳನ್ನು ಈ ಮಾರ್ಗ ನಿರ್ಮಾಣಕ್ಕಾಗಿ ವಶಕ್ಕೆ ಪಡೆದುಕೊಳ್ಳಲಾಗುತ್ತದೆ.

38 ಕಿ. ಮೀ. ಮೆಟ್ರೋ ಮಾರ್ಗ
ಕೆ. ಆರ್. ಪುರ-ಬೆಂಗಳೂರು ವಿಮಾನ ನಿಲ್ದಾಣ ನಡುವಿನ 38 ಕಿ. ಮೀ. ಮಾರ್ಗದಲ್ಲಿ 15 ಮೆಟ್ರೋ ನಿಲ್ದಾಣಗಳು ಬರಲಿವೆ. 2.23 ಕಿ. ಮೀ.ಗೆ ಒಂದು ನಿಲ್ದಾಣ ಬರಲಿದೆ. ಏರ್ ಪೋರ್ಟ್ ಸಿಟಿ ಮತ್ತು ಕೆಐಎ ಆವರಣದಲ್ಲಿಯೇ ಒಂದೊಂದು ನಿಲ್ದಾಣ ನಿರ್ಮಾಣವಾಗಲಿದೆ.

ಮೊದಲ ಹಂತದಲ್ಲಿ 8 ನಿಲ್ದಾಣಗಳು
ಮೊದಲ ಹಂತದ ಟೆಂಡರ್‌ನಲ್ಲಿ 8 ನಿಲ್ದಾಣಗಳು ಬರಲಿವೆ. ಕಸ್ತೂರಿ ನಗರ, ಹೊರಮಾವು, ಹೆಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ಹೆಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ ನಿಲ್ದಾಣಗಳು ಈ ಹಂತದಲ್ಲಿ ಸೇರಿವೆ.

2ನೇ ಹಂತದಲ್ಲಿ 5 ನಿಲ್ದಾಣ
ಟೆಂಡರ್‌ನ 2ನೇ ಹಂತದಲ್ಲಿ ಒಟ್ಟು 5 ನಿಲ್ದಾಣಗಳು ಬರಲಿವೆ. ಹೆಬ್ಬಾಳ, ಕೋಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ ಮತ್ತು ಬಾಗಲೂರು ಕ್ರಾಸ್ ನಿಲ್ದಾಣಗಳಿ ಈ ಟೆಂಡರ್ ವ್ಯಾಪ್ತಿಗೆ ಸೇರಿವೆ.

3ನೇ ಹಂತದ ಟೆಂಡರ್
3ನೇ ಹಂತದ ಟೆಂಡರ್‌ನಲ್ಲಿ ಬೆಟ್ಟಹಲಸೂರು ಮತ್ತು ದೊಡ್ಡಜಾಲ ನಿಲ್ದಾಣಗಳು ಸೇರಿವೆ. ಏರ್ ಪೋರ್ಟ್ ಸಿಟಿ ಮತ್ತು ಕೆಐಎ ಆವರಣದಲ್ಲಿ ಬರುವ ನಿಲ್ದಾಣಗಳಿಗೆ ಇನ್ನೂ ಟೆಂಡರ್ ಕರೆದಿಲ್ಲ. ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವೇ ನಿಲ್ದಾಣದ ಆವರಣದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಿಕೊಳ್ಳಲಿದೆ.












Click it and Unblock the Notifications