ಬೆಂಗಳೂರು : ದುರ್ಗಾಪರಮೇಶ್ವರಿ ದೇಗುಲದಲ್ಲಿ ಸ್ಫೋಟ

ಭಾನುವಾರ ರಾತ್ರಿ 9 ಗಂಟೆಗೆ ಅರ್ಚಕರು ಮಹಾಮಂಗಳಾರತಿ ಮುಗಿಸಿ, ಮನಗೆ ಮರಳಿದ ಕೆಲವೇ ಹೊತ್ತಿನಲ್ಲಿ ಗರ್ಭಗುಡಿಯಲ್ಲಿ ಈ ಲಘು ಸ್ಫೋಟ ಸಂಭವಿಸಿದೆ. ಸ್ಫೋಟ ಶಬ್ದ ಕೇಳಿ ಆತಂಕಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣವೇನೆಂದು ತಿಳಿದು ಬಂದಿಲ್ಲ. ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಜೌರಾದ್ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಸ್ಫೋಟದ ಶಬ್ದ ಕೇಳಿ ಜನರೆಲ್ಲ ದೇವಸ್ಥಾನದ ಮುಂದೆ ಜಮಾಯಿಸಿದರು. ದೇವಸ್ಥಾನದ ಗೋಡೆಗಳು ಬಿರುಕು ಬಿಟ್ಟಿದ್ದು ಎಲ್ಲರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನಜಂಗುಳಿ ದೇವಸ್ಥಾನದ ಒಳಗೆ ಪ್ರವೇಶಿಸದಂತೆ ನಿರ್ಬಂಧ ಹಾಕಿ, ತನಿಖೆ ಕೈಗೊಂಡಿದ್ದಾರೆ. ಸೋಮವಾರ ಬೆಳಗ್ಗೆ ದೇವಾಲಯದ ಅರ್ಚಕ ಮಹೇಶ್ ಭಟ್ ಸೇರಿದಂತೆ ಇತರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದೇವಾಲಯದಲ್ಲಿ ಶೇಖರಣೆಯಾಗಿದ್ದ ಅಗರಬತ್ತಿ ಹಾಗೂ ಕರ್ಪೂರ ರಾಶಿ ಮೇಲೆ ದೀಪ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಗರ್ಭಗುಡಿಯ ತುಂಬಾ ಹೊಗೆ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಉತ್ಪತ್ತಿಯಾದ ಮಿಥೇನ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಹೇಳಿದ್ದಾರೆ.
ಪೊಲೀಸರು ಹೇಳುವಂತೆ, ಅರ್ಚಕರು ದೀಪ ಹಚ್ಚಿಟ್ಟು ಗರ್ಭಗುಡಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಭಕ್ತಾದಿಗಳು ನೀಡಿದ್ದ ಅಗರಬತ್ತಿ ಹಾಗೂ ಕರ್ಪೂರವನ್ನು ದೀಪದ ಕೆಳಗೇ ರಾಶಿಯಾಗಿ ಶೇಖರಿಸಲಾಗಿತ್ತು. ದೀಪ ಈ ಶೇಖರಣೆ ಮೇಲೆ ಬಿದ್ದಿದೆ. ಗರ್ಭಗುಡಿಯಲ್ಲಿ ಗಾಳಿ ಸಂಚರಿಸಲು ಅವಕಾಶ ಇಲ್ಲ. ಹೀಗಾಗಿ, ದಟ್ಟ ಹೊಗೆ ಆವರಿಸಿದ್ದರಿಂದ ಬಾಗಿಲು ಸಿಡಿದಿದೆ ಎಂದು ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ಔರಾದ್ಕಾರ್, ವರಿಷ್ಠ ಅಧಿಕಾರಿಗಳಾದ ಕಮಲ್ ಪಂಥ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರ ಸ್ಫೋಟಕ್ಕೆ ನಿಖರವಾದ ಕಾರಣಗಳೇನು ಎಂದು ತಿಳಿದುಬರಲಿದೆ.
ಪುರಾತನ ದೇವಾಲಯ : ಬನಶಂಕರಿ ಎರಡನೇ ಹಂತದ ಕಾವೇರಿನಗರದಲ್ಲಿರುವ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ 40 ವರ್ಷಗಳ ಇತಿಹಾಸವಿದೆ. 2 ವರ್ಷಗಳ ಹಿಂದೆ ದೇವಾಲಯವನ್ನು ನವೀಕರಣ ಮಾಡಲಾಗಿತ್ತು. (ಬಿಜೆಪಿ ಕಚೇರಿ ಬಳಿ ಸ್ಫೋಟ : 14 ಜನ ಆರೋಪಿಗಳು)


Click it and Unblock the Notifications
