ಬಿಜೆಪಿಯಿಂದ ‘Save Bengaluru’ ಎಂಬ ಹೊಸ ಅಭಿಯಾನ
ಬೆಂಗಳೂರು, ಫೆಬ್ರವರಿ 04 : ಕರ್ನಾಟಕ ಬಿಜೆಪಿ 'Save Bengaluru' ಎಂಬ ಅಭಿಯಾನವನ್ನು ಆರಂಭಿಸಲಿದೆ. ಈ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸ ಅಭಿಯಾನವನ್ನು ರಾಜಧಾನಿಯಲ್ಲಿ ಕೈಗೆತ್ತಿಕೊಳ್ಳಲಿದೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'Save Bengaluru ಎಂಬ ಅಭಿಯಾನದಡಿ ಮನೆ-ಮನೆ ಪ್ರಚಾರವನ್ನು ನಗರದಲ್ಲಿ ನಡೆಸಲಾಗುತ್ತದೆ' ಎಂದು ಹೇಳಿದರು.
'ಸಿದ್ದರಾಮಯ್ಯ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬೆಂಗಳೂರು ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಸರ್ಕಾರ ಅವರನ್ನು ರಕ್ಷಣೆ ಮಾಡುತ್ತಿದೆ' ಎಂದು ಆರೋಪಿಸಿದರು.

'ಡ್ರಗ್ ಮಾಫಿಯಾ ವಿರುದ್ಧ ಹೋರಾಟ ಮಾಡುತ್ತಿದ್ದ ಕಾರಣಕ್ಕೆ ಬೆಂಗಳೂರಿನಲ್ಲಿ ಸಂತೋಷ್ ಹತ್ಯೆ ಮಾಡಲಾಗಿದೆ. ಸರ್ಕಾರ ಹತ್ಯೆ ಪ್ರಕರಣದ ಆರೋಪಿ ವಾಸಿಂ ರಕ್ಷಣೆ ಮಾಡುತ್ತಿದೆ' ಎಂದು ಮುರಳೀಧರರಾವ್ ದೂರಿದರು.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿವಿಧ ನಾಯಕರು ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಮನೆ-ಮನೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.
ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ನಗರ ಕ್ಷೇತ್ರದ ಶಾಸಕರು. ಬಿಟಿಎಂ ಕ್ಷೇತ್ರದವರು. ಆದ್ದರಿಂದ, ನಗರದಲ್ಲಿ ಅಭಿಯಾನ ನಡೆಸಿ ಸರ್ಕಾರ ಮತ್ತು ಗೃಹ ಸಚಿವರ ವಿರುದ್ಧ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದೆ.












Click it and Unblock the Notifications