ಕಲಬುರಗಿ: ಜ.4ರಂದು ಬಿಜೆಪಿಯಿಂದ ಬೃಹತ್ ಹೋರಾಟ
ಬೆಂಗಳೂರು, ಜನವರಿ 02: ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕಳೆದ ಒಂದು ವರ್ಷದಲ್ಲಿ ಬಿಜೆಪಿ ಬಹಳಷ್ಟು ಹೋರಾಟಗಳನ್ನು ಮಾಡಿದೆ. ಎಲ್ಲ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು. ಇದೀಗ ಬೀದರ್ ಗುತ್ತಿಗೆದಾರರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 4 ರಂದು ಕಲಬುರ್ಗಿಯಲ್ಲಿ ಬಿಜೆಪಿಯಿಂದ ಬೃಹತ್ ಹೋರಾಟ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಮೃತ ಸಚಿನ್ ಅವರ ಡೆತ್ ನೋಟ್ ನಲ್ಲಿದೆ. ಸಚಿವರ ಆಪ್ತನೇ ಸಾವಿಗೆ ಕಾರಣ. ಆದರೆ ಎಐಸಿಸಿ ಅಧ್ಯಕ್ಷರ ಮಗನಾದ ಕಾರಣಕ್ಕೆ ರಾಜೀನಾಮೆ ಪಡೆಯದೆ ಸಿಎಂ ಸಿದ್ದರಾಮಯ್ಯ ಗಢಗಢ ನಡುಗುತ್ತಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕ ರಾಜ್ಯ ಸರ್ಕಾರದ ಒತ್ತಡ ತಾಳಲಾಗದೆ ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಅಧಿಕಾರಿಗಳು ಆತ್ಮಹತ್ಯೆಗೆ ಮುಂದಾಗುತ್ತಿದ್ದು, ಇದು ಕೊಲೆಗಡುಕ ಸರ್ಕಾರವಾಗಿದೆ. ಗೋ ರಕ್ಷಣೆ ಎನ್ನುವುದು ಭಾರತದ ಸಂಸ್ಕೃತಿ. ಇದಕ್ಕಾಗಿ ಬಿಜೆಪಿ ಯೋಜನೆ ರೂಪಿಸಿತ್ತು. ಈಗಿನ ಪಾಪರ್ ಸರ್ಕಾರ ಗೋವಿನ ಅನ್ನಕ್ಕೂ ಕನ್ನ ಹಾಕಿದೆ ಎಂದು ಆಕ್ರೋಶ ಹೊರ ಹಾಕಿದರು.
ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಲಿ
ಕಾಂಗ್ರೆಸ್ ನಾಯಕರು ಮಹಿಳಾ ಸಬಲೀಕರಣದ ಕುರಿತು ಭಾಷಣ ಮಾಡುತ್ತಾರೆ. ಮಹಿಳೆಯರಿಗೆ ಮಾಸಿಕ 2000 ರೂಪಾಯಿ ನೀಡುವ ಬದಲು ಮಹಿಳೆಯರ ಜೀವ ಉಳಿಸಬೇಕಿದೆ. ಬಾಣಂತಿಯರಿಗೆ ಬದುಕುವ ಗ್ಯಾರಂಟಿ ನೀಡಬೇಕು. ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಬೇಕು. ಬಾಣಂತಿಯರ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದರು.
ವಿವಿಧ ಆಸ್ಪತ್ರೆಗಳಲ್ಲಿ ಬಾಣಂತಿಯರ ಮರಣ ಮೃದಂಗ ಮುಂದುವರಿದಿದೆ. ರಾಜ್ಯದಲ್ಲಿ ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದೆ. ಸರ್ಕಾರವೇ ಇದರ ನೇರ ಹೊಣೆಯಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಬಾಣಂತಿ ಸಾವಿಗಿಡಾಗಿದ್ದಕ್ಕೆ ಪತಿ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಪೂರೈಸಿದ ಐವಿ ದ್ರಾವಣದಿಂದಾಗಿ ಬಾಣಂತಿಯರು ಮೃತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಸಮಾವೇಶ ನಡೆದಾಗಲೇ ಬಾಣಂತಿಯರು ಮೃತಪಟ್ಟಿದ್ದರೂ ಅಲ್ಲಿಗೆ ಹಿರಿಯ ನಾಯಕರು ಭೇಟಿ ನೀಡಿಲ್ಲ ಎಂದು ಹೇಳಿದರು.
ಸದನದಲ್ಲಿ ಸರ್ಕಾರ ಸುಳ್ಳು ಹೇಳಿದೆ
ಔಷಧಿ ಕಂಪನಿ ಪೂರೈಸಿದ ಔಷಧದ ವಿಚಾರದಲ್ಲಿ ಡ್ರಗ್ ಕಂಟ್ರೋಲರ್ ಮಾಡಿದ ತಪ್ಪುಗಳ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದಾರೆ. ಆದರೆ ಅಧಿವೇಶನದಲ್ಲಿ ಮಾತ್ರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ ಎಂದರು.
ಡೆತ್ ಆಡಿಟ್ ಬಗ್ಗೆ ಸರ್ಕಾರ ಹೇಳಿದ್ದರೂ, ಈವರೆಗೆ ಆ ವರದಿ ಬಂದಿಲ್ಲ. ಅಧಿವೇಶನದಲ್ಲಿ ನುಣುಚಿಕೊಳ್ಳಲು ಸರ್ಕಾರ ಉತ್ತರ ನೀಡಿದೆಯೇ ಹೊರತು ಯಾವುದೇ ಕಠಿಣ ಕ್ರಮ ವಹಿಸಿಲ್ಲ. ಸರ್ಕಾರದ ಈ ನಡೆಯನ್ನು ಅವರು ಖಂಡಿಸಿದರು.
ರಾಜ್ಯ ಸರ್ಕಾರ ಔಷಧಿಯನ್ನು ಪರೀಕ್ಷಿಸಬೇಕು. ಬೇರೆ ರಾಜ್ಯಗಳಲ್ಲಿ ಎಲ್ಲೂ ಈ ಸಾವುಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಘಟನೆಗಳು ನಡೆಯುತ್ತಿದೆ. 462 ಔಷಧಿಗಳು ಕಳಪೆ ಎಂದು ಸರ್ಕಾರವೇ ಹೇಳಿದೆ. ಆದರೂ ಇದೇ ಔಷಧಿಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.












Click it and Unblock the Notifications