Bjp Mla Munirathna: ಕುಸುಮಾ ಹೇಳೋದನ್ನ ಡಿ.ಕೆ ಶಿವಕುಮಾರ್ ಕೇಳ್ತಾರೆ: ಬಿಜೆಪಿ ಶಾಸಕ ಮುನಿರತ್ನ
ಕಾಂಗ್ರೆಸ್ ಪಕ್ಷದ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರು ಹೇಳೋದನ್ನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಂಸದ ಡಿಕೆ ಸುರೇಶ್ ಅವರು ಕೇಳುತ್ತಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಹೇಳಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿಯಾದ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ಜೋರಾಗಾಗಿದೆ. ಇದೀಗ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವರ್ಗಾವಣೆಗಳನ್ನು ಸಹ ಕುಸುಮಾ ಅವರು ಹೇಳಿದಂತೆ ಮಾಡಲಾಗುತ್ತದೆ ಎನ್ನುವ ಗಂಭೀರ ಆರೋಪವನ್ನು ಮುನಿರತ್ನ ಅವರು ಮಾಡಿದ್ದಾರೆ.
ಶಾಸಕರು ಆಗಲೇಬೇಕು ಎಂದು ಪಣತೊಟ್ಟಿರುವ ಕುಸುಮಾ ಅವರಿಗೆ ಒಂದು ಕಿವಿ ಮಾತು ಹೇಳುತ್ತೇನೆ. ಈ ರೀತಿ ಎಲ್ಲಾ ಪ್ರಚೋದನೆ ಕೊಡಬೇಡಿ. ನೀವು ವಿದ್ಯಾವಂತರು ಹಾಗೂ ಬುದ್ಧಿವಂತರು ಅಂತ ಹೇಳಿಕೊಂಡಿದ್ದೀರಿ. ವಿದ್ಯಾವಂತರಾಗಿ ಹಾಗೂ ಬುದ್ಧಿವಂತರಾಗಿ ಇಷ್ಟೊಂದು ಕೆಳಮಟ್ಟದ ರಾಜಕೀಯವನ್ನು ಮಾಡಬೇಡಿ.
ಇದು ನಿಮಗೆ ಒಳ್ಳೆಯದಲ್ಲ ಸಚಿವರು ನಿಮ್ಮ ಕೈಯಲ್ಲಿ ಇದ್ದಾರೆ. ಮಾಜಿ ಸಂಸದರು ನಿಮ್ಮ ಕೈಯಲ್ಲಿ ಇದ್ದಾರೆ. ನಮ್ಮ ಕ್ಷೇತ್ರಕ್ಕೆ ನೀವು ಸಹಾಯ ಮಾಡಿ, ಸರ್ಕಾರದಿಂದ ಅನುದಾನ ಕೊಡಿಸಿಕೊಡಿ. ಈ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಿ. ನೀವು, ನಾನು ಈ ರೀತಿ ಕೆಲ್ಸ ಮಾಡ್ತೀನಿ ಎಂದು ಜನರ ಮುಂದೆ ಬಂದು ಹೇಳಿ ಅದನ್ನು ಬಿಟ್ಟು ಈ ರೀತಿ ಮಾಡಬೇಡಿ ಎಂದಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಇಂದಿನ ದಿನ ನೀವು ಏನು ಹೇಳಿದರೂ ಕೇಳುತ್ತಾರೆ. ಯಾಕೆಂದರೆ ನೀವು ಇಲ್ಲಿಂದ ವರ್ಗಾವಣೆ ಪತ್ರಗಳನ್ನೇಲ್ಲ ಕೊಡುತ್ತೀರಿ. ಇದನ್ನು ನೋಡಿದರೆ ನಿಮ್ಮ ಮಾತನ್ನು ಅವರು ಕೇಳುತ್ತಿದ್ದಾರೆ ಎಂದೇ ಅರ್ಥ. ಹೀಗಾಗಿ, ನಮ್ಮ ಕ್ಷೇತ್ರದಲ್ಲಿ ನಿಂತಿರುವ ಕೆಲಸಗಳನ್ನು ಮಾಡಿಸಿಕೊಡಿ.
ಮುಂದೆ ಸಮಾಜಕ್ಕೆ ಹಾಗೂ ನಮ್ಮ ಕ್ಷೇತ್ರಕ್ಕೆ ಒಳ್ಳೆಯದು ಏನಾಗಬೇಕೋ ಅದನ್ನು ಮಾಡಿಸಿ. ಅದನ್ನು ಬಿಟ್ಟು ಮುನಿರತ್ನ ಬಗ್ಗೆ ಪೋಸ್ಟರ್ ಅಂಟಿಸಿ, ಹಲ್ಲೆ ಮಾಡಿ, ಚಪ್ಪಲಿ ಹಾರ ಹಾಕಿ, ಪೋಸ್ಟರ್ ಹಾಕಿಸಿ, ಮುನಿರತ್ನಗೆ ಮಸಿ ಬಳಿಯಿರಿ ಎನ್ನುವುದನ್ನು ಹೇಳಬೇಡಿ.

ವಿದ್ಯಾವಂತರಾಗಿ ಇದು ನಿಮಗೆ ಶೋಭೆ ತರುವುದಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮುನಿರತ್ನ ಅವರು ಹೇಳಿದ್ದಾರೆ. ಅಲ್ಲದೆ ಮುಂದುವರಿದು ಇದನ್ನು ನೀವು ಸರಿಪಡಿಸಿಕೊಳ್ಳಿ ಎಂದೂ ಅವರು ಹೇಳಿದ್ದಾರೆ. ಮುನಿರತ್ನ ಅವರು ಕುಸುಮಾ ಅವರನ್ನು ಗುರಿಯಾಗಿಸಿಕೊಂಡು ನೀಡರುವ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಗನ್‌ಮ್ಯಾನ್ ಕೇಳಿದ್ದೆ ಕೊಟ್ಟಿಲ್ಲ: ಇನ್ನು ನನಗೆ ಕೊಲೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್‌ಮ್ಯಾನ್ ಕೊಡುವಂತೆ ಕೇಳಿದ್ದೆ. ಆದರೆ, ಇಲ್ಲಿಯ ವರೆಗೆ ಕೊಟ್ಟಿಲ್ಲ ಎಂದು ಶಾಸಕ ಮುನಿರತ್ನ ಅವರು ದೂರಿದ್ದಾರೆ. ನನ್ನ ಜೀವಕ್ಕೆ ಏನಾದರೂ ಹೆಚ್ಚುಕಡಿಮೆಯಾದರೆ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಹಾಗೂ ಕುಸುಮಾ ಅವರೇ ಕಾರಣ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕುಸುಮಾ ಅವರು, ಮುನಿರತ್ನ ನನ್ನ ವಿರುದ್ಧ ಆಧಾರ ರಹಿತವಾಗಿ ಮಾತನಾಡುತ್ತಿದ್ದಾರೆ. ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದರು. ಇದೀಗ ಶುಕ್ರವಾರ ಮತ್ತೆ ಕುಸುಮಾ ಅವರ ಮೇಲೆ ಮುನಿರತ್ನ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರು ಕುಸುಮಾ ಅವರು ಹೇಳಿದ್ದನ್ನು ಕೇಳುತ್ತಾರೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications