ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸುದ್ದಿಗೋಷ್ಠಿ
ಬೆಂಗಳೂರು ಸೆಪ್ಟೆಂಬರ್ 22: ಕರ್ನಾಟಕದಲ್ಲಿ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಆಡಳಿತ ಮಾಡಿದವು. ಆದರೀಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿವೆ ಎನ್ನುವ ವಿಚಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮೈತ್ರಿ ಕುರಿತು ಮತ್ತು ಎಷ್ಟು ಸೀಟುಗಳಲ್ಲಿ ಮೈತ್ರಿ ಮಾಡಿಕೊಳ್ಳಲಿವೆ ಎಂಬುದನ್ನು ದೇವೇಗೌಡರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಅದು ಸುದೀರ್ಘವಾಗಿ ಉಳಿಯಲಿಲ್ಲ. ಆದರೀಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಮುಂದಾಗಿವೆ. ಈ ಬಗ್ಗೆ ಎರಡು ಪಕ್ಷಗಳ ನಡುವೆ ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ. ಇದು ಅದೆಷ್ಟು ಯಶಸ್ವಿಯಾಗುತ್ತೋ ಅನ್ನೋ ಕುತೂಹಲ ಮೂಡಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲಿವೆ. ಮೈತ್ರಿಗಾಗಿ ಜೆಡಿಎಸ್ ಹಲವಾರು ಬೇಡಿಕೆಗಳನ್ನು ಬಿಜೆಪಿ ಮುಂದಿಟ್ಟಿದೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಸ್ಪರ್ಧಿಸಲಿವೆ.
ಇದರ ಬೆನ್ನಲ್ಲೇ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಇಂದು ಶುಕ್ರವಾರ ದೆಹಲಿಯಲ್ಲಿ ಬೆಳಗ್ಗೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಕೆರಳಿಸಿದೆ.
ನಿನ್ನೆ ದೇವೇಗೌಡರ ನಿವಾಸಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸಿ ಭೇಟಿ ನೀಡಿದ್ದು ಕೂಡ ಹಲವು ಕುತೂಹಲಕ್ಕೆ ಕಾರಣವಾಗಿದೆ. ನಿನ್ನೆ ದೆಹಲಿಗೆ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಹಾಗೂ ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ ದೆಹಲಿಗೆ ಆಗಮಿಸಿದ್ದು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಹೋದರ ರೇವಣ್ಣ, ಪ್ರಜ್ವಲ್ ರೇವಣ್ಣ, ನಿಖಿಲ್, ಸಾ.ರಾ.ಮಹೇಶ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಮಾಜಿ ಸಿಎಂ ಕುಮಾರಸ್ವಾಮಿ ದೋಸ್ತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ನಿನ್ನೆ ಮೈತ್ರಿ ಸಂಬಂಧ ದೆಹಲಿಯ ಸಫ್ದರ್ಜಂಗ್ ಲೇನ್ನಲ್ಲಿರುವ ದೇವೇಗೌಡರ ನಿವಾಸಲ್ಲಿ ಮಹತ್ವದ ಸಭೆ ನಡೆದಿದೆ.
ಕರ್ನಾಟಕದಲ್ಲಿ 6 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲೇ ಬೇಕು ಎಂದು ಬಿಜೆಪಿ ಮುಂದೆ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಮಂಡ್ಯ, ಹಾಸನ, ಕೋಲಾರ, ತುಮಕೂರು ಸೀಟ್ಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದ್ದು, ಈ ಪೈಕಿ ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಕರ್ನಾಟಕದಲ್ಲಿ ರೈತರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಯನ್ನು ಚುರುಕುಗೊಳಿಸಿದ್ದಾರೆ. ಆದರೆ ರಾಜಕಾರಣಿಗಳು ಮೈತ್ರಿಗಾಗಿ ಬಡಿದಾಡುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications