Joint Session: ಬಿಜೆಪಿ ಯೋಜನೆಗಳನ್ನು ತಮ್ಮವೆಂದು ಬಿಂಬಿಸಿದ ಕಾಂಗ್ರೆಸ್: ಬಿಜೆಪಿ ನಾಯಕರು ಹೇಳಿದ್ದೇನು?
ಬೆಂಗಳೂರು, ಫೆಬ್ರವರಿ 12: ಇಂದಿನಿಂದ ಕರ್ನಾಟಕ ರಾಜ್ಯ ಸರ್ಕಾರದಿಂದ ಬಜೆಟ್-2024 ಮೇಲಿನ ಜಂಟಿ ಅಧಿವೇಶನ ಆರಂಭವಾಗಿದೆ. ಈ ವೇಳೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಪೂರ್ವದಲ್ಲಿ ಮಾತನಾಡಿದರು. ಈ ವೇಳೆ ಅವರು ಸರ್ಕಾರ ಸಾಧನೆಗಳ ಬಗ್ಗೆ ಮಾತನಾಡಿದ್ದು, ಬಿಜೆಪಿ ಪಡೆಯ ಕೋಪಕ್ಕೆ ಕಾರಣವಾಗಿದೆ. ಈ ಸಂಬಂಧ ವಿಪಕ್ಷ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳು ಕಿಡಿ ಕಾರಿದ್ದಾರೆ.
ಬಿಜೆಪಿ ಅವಧಿಯ ಕೆಲಸಗಳನ್ನು ತಮ್ಮ ಸಾಧನೆ ಎಂದು ಕಾಂಗ್ರೆಸ್ ಸರ್ಕಾರದವರು ಹೇಳಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ನಮ್ಮ ಕಾಲದಲ್ಲಿ ಜಾರಿಗೆ ತಂದ ಯೋಜನೆಗಳನ್ನು ತಮ್ಮ ಸಾಧನೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಇಂತಹ ಸಪ್ಪೆ, ನಿರಾಸೆಯ ಭಾಷಣ ಯಾವತ್ತೂ ಕೇಳಿರಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಜನವಿರೊಧಿ ಸರ್ಕಾರ ಇರುವುದನ್ನು ತೋರಿಸುತ್ತದೆ.
ಬಿಜೆಪಿ ಸಾಧನೆಯನ್ನು ತಮ್ಮವೆಂದು ಬಿಂಬಿಸಿದ್ದಾರೆ
ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಯಾವುದೇ ವಿಚಾರದಲ್ಲಿ ಸಾಧನೆ ಮಾಡಿರುವುದು ಕಾಣಿಸುವುದಿಲ್ಲ. ನಾವು ಮಾಡಿರುವ ಯೋಜನೆಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಂಡಿದ್ದಾರೆ. ಜಲಜೀವನ್ ಮಿಷನ್, ಬಡವರಿಗೆ ಮನೆ ನಿರ್ಮಾಣ ಎಲ್ಲವೂ ನಮ್ಮ ಯೋಜನೆಗಳು ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ ನಮ್ಮ ಅವಧಿಯಲ್ಲಿ ಆರಂಭಿಸಿಧ್ದೇವೆ ಅದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ದೂರಿದರು.
ನೀರಾವರಿ ಯೋಜನೆಗಳಿಗೆ ಎಂಟು ತಿಂಗಳಲ್ಲಿ 10ಸಾವಿರ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದಾರೆ. ಯಾವ ಯೋಜನೆಗೆ ಎಷ್ಟು ಖರ್ಚು ಮಾಡಿಸಿದ್ದಾರೆ ಎಂದು ದಾಖಲೆ ನೀಡಲಿ ಎಂದು ಬೊಮ್ಮಾಯಿಯವರು ಸವಾಲೆಸೆದರು.

ರಾಜ್ಯಪಾಲರಿಂದ ಸುಳ್ಳು ಹೇಳಿಸಿದ ಸರ್ಕಾರ: ಆರ್.ಅಶೋಕ್
ಕಾಂಗ್ರೆಸ್ ಸರ್ಕಾರ ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಅಲ್ಲದೇ ರಾಜ್ಯ ಬಿಜೆಪಿಯ ಅವಧಿಯ ಯೋಜನೆಗಳನ್ನು ತಮ್ಮದೇ ಯೋಜನೆಯಾಗಿ ಬಿಂಬಿಸಿಕೊಂಡಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ಗೌರವಾನ್ವಿತ ರಾಜ್ಯಪಾಲರ ಬಾಯಲ್ಲಿ ಸುಳ್ಳುಗಳನ್ನು ಹೇಳಿಸಿದೆ. ಹಿಂದಿನ ಬಿಜೆಪಿ ಸರ್ಕಾರ ತಂದ ಯೋಜನೆಗಳನ್ನು, ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದೇ ಯೋಜನೆ ಎಂದು ಕಾಂಗ್ರೆಸ್ ಬಿಂಬಿಸಿಕೊಂಡಿದೆ ಎಂದು ಆರೋಪಿಸಿದೆ.
ಗ್ಯಾರೆಂಟಿಗಳ ಹಣ ನಿರುದ್ಯೋಗಿಗಳ ಕೈಸೇರಿಲ್ಲ
ಕಾಂಗ್ರೆಸ್ ತಾವು ಐದು ಗ್ಯಾರಂಟಿ ತಂದಿದ್ದೇವೆ ಎಂದು ಹೇಳಿದ್ದರೂ ಯುವನಿಧಿ ಇನ್ನೂ ನಿರುದ್ಯೋಗಿಗಳ ಕೈ ಸೇರಿಲ್ಲ. ಬರ ಪರಿಹಾರ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಪರಿಹಾರವನ್ನು ಕಂತಾಗಿ ನೀಡಬಾರದು. ಹಿಂದಿನ ಬಿಜೆಪಿ ಸರ್ಕಾರ ಪರಿಹಾರವನ್ನು ಒಂದೇ ಸಲಕ್ಕೆ ರೈತರ ಖಾತೆಗೆ ಹಾಕಿತ್ತು. ಈ ಸರ್ಕಾರ ಕಂತು ಕಂತಾಗಿ ನೀಡುವುದು ತಪ್ಪು. ನಾವು 25 ಸಾವಿರ ರೂ. ಪರಿಹಾರ ಕೇಳಿದ್ದರೆ, ಆ ವಿಷಯವನ್ನು ಪ್ರಸ್ತಾಪಿಸಿಲ್ಲ. ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗಿದೆ ಎಂದು ಅವರು ದೂರಿದರು.
ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಅವರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ, ಶಾಸಕರಿಗೆ ಅನುದಾನ ನೀಡದೆ ಸತಾಯಿಸುತ್ತಿದೆ. ಯಾವ ಯೋಜನೆಗೂ ಹಣ ನೀಡದೆ ಗ್ಯಾರಂಟಿಗೆ ಮಾತ್ರ ಹಣ ಕೊಟ್ಟಿರುವುದೇ ಆರ್ಥಿಕ ಅಸಮಾನತೆ. ದಲಿತರ ಹಣವನ್ನು ಗ್ಯಾರಂಟಿಗಾಗಿ ಬಳಕೆ ಮಾಡಿರುವುದೇ ಆರ್ಥಿಕ ಅಸಮಾನತೆ. ಹೀಗಿದ್ದರೂ ಪ್ರಧಾನಿ ಸರ್ಕಾರದ ವಿರುದ್ಧ ಬೆಟ್ಟು ತೋರಿಸುತ್ತಿದ್ದಾರೆ ಎಂದು ಅವರು ಟಾಂಗ್ ನೀಡಿದರು.












Click it and Unblock the Notifications