NIA: ಕೊಪ್ಪಳ ಯುವಕನ ಕೇಸ್ ಎನ್‌ಐಎಗೆ ವಹಿಸಬೇಕು: ರಾಜ್ಯಪಾಲರಿಗೆ ಬಿಜೆಪಿ ಮನವಿ
ಬೆಂಗಳೂರು, ಆಗಸ್ಟ್ 13: ಕೊಪ್ಪಳದ ವಾಲ್ಮೀಕಿ ಸಮುದಾಯದ ಹಿಂದೂ ಯುವಕ ಗವಿಸಿದ್ದಪ್ಪ ನಾಯಕ ಅವರನ್ನು ಮಸೀದಿಯೊಂದರ ಮುಂದೆ ಬರ್ಬರವಾಗಿ ಹತ್ಯೆ ಮಾಡಿಲಾಗಿತ್ತು. ಈ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ವಹಿಸಬೇಕೆಂದು ಕರ್ನಾಟಕ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತು NDA ಮೈತ್ರಿಕೂಟದ ಶಾಸಕರು ಹಾಗೂ ಪ್ರಮುಖರ ನಿಯೋಗದೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ವಿಚಾರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬುಧವಾರ ಮಾಹಿತಿ ಹಂಚಿಕೊಂಡಿರುವ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಗವಿಸಿದ್ದಪ್ಪ ನಾಯಕ ಅವರು ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಕಾರಣಕ್ಕಾಗಿ ಮತಾಂಧ ಕ್ರೂರಿಯಿಂದ ಅಮಾನುಷವಾಗಿ ಕೊಲೆಯಾಗಿರುವ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮತಬ್ಯಾಂಕ್ ಓಲೈಕೆಯ ರಾಜಕಾರಣ ಮಾಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಯುವಕನ ಸಾವಿಗೆ ನ್ಯಾಯ ಸಿಗುವುದಿಲ್ಲ. ಇದುಮೃತನ ಕುಟುಂಬ, ಸ್ಥಳೀಯರು ಹಾಗೂ ವಾಲ್ಮೀಕಿ ಸಮುದಾಯದ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಮೃತ ಯುವಕನಿಗೆ ನ್ಯಾಯ ಸಿಗದ ಎಂಬುದಕ್ಕೆ ಪೂರಕವೆಂಬಂತೆ ಪೊಲೀಸ್ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ. ಕೊಲೆಗಡುಕನನ್ನು ಬಂಧಿಸುವಲ್ಲಿಯೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ತನಿಖೆಯನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಸ್ಥಳೀಯರು ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ.
ಗವಿಸಿದ್ದಪ್ಪ ಅವರ ಕೊಲೆಯ ಹಿಂದೆ ದೇಶವಿದ್ರೋಹಿ ಮನಸ್ಥಿತಿಯ ಜಾಲದ ಕೈವಾಡವಿರುವ ಅನುಮಾನವೂ ಇದೆ. ಆದ್ದರಿಂದ ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸುವುದು ಅತ್ಯಾವಶ್ಯಕವಾಗಿದೆ. ಆದ್ದರಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ NIA ತನಿಖೆ ಕೈಗೆತ್ತಿಕೊಳ್ಳುವಂತೆ ಕ್ರಮ ವಹಿಸುವಂತೆ ಮೃತ ಗವಿಸಿದ್ದಪ್ಪ ನಾಯಕ ಅವರ ಕುಟುಂಬಸ್ಥರೊಂದಿಗೆ ಮನವಿ ಸಲ್ಲಿಸಲಾಯಿತು ಎಂದರು.
ಈ ಬಿಜೆಪಿ ನಿಯೋಗದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್, ಮಾಜಿ ಸಚಿವ ಬಿ.ಶ್ರೀರಾಮುಲು, ಗಾಲಿ ಜನಾರ್ಧನ ರೆಡ್ಡಿ, ಜೆಡಿಎಸ್ ಶಾಸಕ ಪಕ್ಷದ ನಾಯಕರಾದ ಸಿ.ಬಿ.ಸುರೇಶ್ ಬಾಬು, ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು, ಮಾಜಿ ಶಾಸಕರುಗಳು ನಿಯೋಗದಲ್ಲಿದ್ದರು. ಪ್ರಕರಣವನ್ನು ಎಸ್‌ಐಟಿಗೆ ನೀಡುವ ಅಗತ್ಯತೆ ಕುರಿತು ರಾಜ್ಯಪಾಲರಿಗೆ ಇವರೆಲ್ಲ ತಿಳಿಸಿದರು.
ಮೃತರ ಕುಟುಂಬಕ್ಕೆ ನೆರವು
ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ವಾಲ್ಮೀಕಿ ಸಮುದಾಯದ ಹಿಂದೂ ಯುವಕ ಗವಿಸಿದ್ದಪ್ಪ ನಾಯಕನ ಹತ್ಯೆಯಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು NIA ತನಿಖೆಗೆ ವಹಿಸಬೇಕು ಎಂದಿರುವ ವಿಜಯೇಂದ್ರ ಅವರು, ಮಂಗಳೂರಿನ ಫಾಜಿಲ್ ಕುಟುಂಬಕ್ಕೆ ನೆರವು ನೀಡಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಡು ಬಡತನವಿರುವ ಮೃತ ಗವಿಸಿದ್ದಪ್ಪ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.












Click it and Unblock the Notifications