BJP Candidates 3rd List: ಬೆಂಗಳೂರಿನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಇಲ್ಲಿದೆ ವಿವರ
ಬೆಂಗಳೂರು, ಏಪ್ರಿಲ್, 17: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ ಇದೀಗ ಸೋಮವಾರ (ಏಪ್ರಿಲ್ 17) ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರಿನ ಹೆಬ್ಬಾಳ, ಗೋವಿಂದರಾಜನಗರ, ಮಹಾದೇವಪುರ ಈ ಮೂರು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ.
ಒಟ್ಟಾರೆಯಾಗಿ 3ನೇ ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಇನ್ನು ಎರಡು ಕ್ಷೇತ್ರಗಳಿಗೆ ಮಾತ್ರ ಬಾಕಿ ಉಳಿಸಿಕೊಂಡಿದೆ. ಬೆಂಗಳೂರಿನ ಹೆಬ್ಬಾಳದಿಂದ ಕಟ್ಟಸುಬ್ರಹ್ಮಣ್ಯ ಬದಲು ಕಟ್ಟ ಜಗದೀಶ್, ಗೋವಿಂದರಾಜನಗರ ಉಮೇಶ್ ಶೆಟ್ಟಿ, ಮಹಾದೇವಪುರ ಕ್ಷೇತ್ರದಿಂದ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಘೋಷಿಸಿದೆ.

ಈ ಪಟ್ಟಿಯಲ್ಲಿಯೂ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ಮಹದೇವಪುರ ಟಿಕೆಟ್ ಘೋಷಣೆ ಆಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಟಿಕೆಟ್ ಕೈತಪ್ಪಿದೆ. ಆದರೆ, ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಅಚ್ಚರಿ ಮೂಡಿಸಿದೆ.
ಅವರವಿಂದ ಲಿಂಬಾವಳಿ ರಾಜಕೀಯದ ಹಾದಿ
ಅರವಿಂದ ಲಿಂಬಾವಳಿ ಅವರು ಬಿಜೆಪಿ ಸರ್ಕಾರದಲ್ಲಿ 4 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2008 ರಿಂದ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನವನ್ನು ನಿಭಾಯಿಸಿಕೊಂಡು ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಮಹದೇವಪುರ (174) ಕ್ಷೇತ್ರದಿಂದ 11,0244 ಮತಗಳಳನ್ನು ಪಡೆಯುವ ಮೂಲಕ ಗೆಲುವು ಸಾಧಸಿದರು. ಆಗ ಎ.ಸಿ. ಕಾಂಗ್ರೆಸ್‌ನ ಶ್ರೀನಿವಾಸ್ ಅವರನ್ನು 6149 ಮತಗಳಿಂದ ಸೋಲಿಸುವ ಮೂಲಕ ವಿಧಾನಸಭೆಗೆ ಆಯ್ಕೆ ಆದರು.
ಇನ್ನು 2018ರ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಿಂದ ಮರು ಆಯ್ಕೆಯಾದರು. ಇದೀಗ ಈ ಬಾರಿ ಲಿಂಬಾವಳಿ ಬದಲಿಗೆ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರನ್ನು ಕಣಕ್ಕಿಳಿಸಿದೆ.












Click it and Unblock the Notifications