ದಿನೇಶ್ ಗುಂಡೂರಾವ್ ರಾಜೀನಾಮೆಗೆ ಬಿಜೆಪಿ ಪಟ್ಟು
ಬೆಂಗಳೂರು, ನ. 13: ಭೂ ಅತಿಕ್ರಮಣದ ಆರೋಪ ಹೊತ್ತಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ದಿನೇಶ ಗುಂಡೂರಾವ್ ರಾಜೀನಾಮೆಗೆ ಬಿಜೆಪಿ ಮುಖಂಡರು ಪಟ್ಟು ಹಿಡಿದಿದ್ದಾರೆ.

ದಿನೇಶ್ ಗುಂಡೂರಾವ್ ಅವರು ಭೂ ಒತ್ತುವರಿ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರು ತಕ್ಷಣ ರಾಜೀನಾಮೆ ನೀಡಬೇಕು. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ಅವರನ್ನು ಸಂಪುಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸ್ಪಷ್ಟಪಡಿಸಲಿ:
ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಎಸ್. ಈಶ್ವರಪ್ಪ, ಭೂ ಒತ್ತುವರಿ ಪ್ರಕರಣದಲ್ಲಿ ಸರ್ಕಾರ ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದೆ. ಆದರೆ, ದಿನೇಶ್ ಗುಂಡೂರಾವ್ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಯೇ ಇಲ್ಲ. ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು. [ಭೂ ಇಕ್ಕಟ್ಟಿನಲ್ಲಿ ದಿನೇಶ್ ಗುಂಡೂರಾವ್: ವಾದ, ಪ್ರತಿವಾದ]
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರ ಮೂಲಕ ಅಗತ್ಯ ವಿವರ ತರಿಸಿಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
20ರಂದು ಸರ್ಕಾರದ ವಿರುದ್ಧ ಧರಣಿ:
ಸರ್ಕಾರದಲ್ಲಿ ವಿವಿಧ ಆರೋಪಗಳನ್ನು ಹೊತ್ತಿರುವ ಸಚಿವರನ್ನು ಕೈಬಿಡಬೇಕು ಎಂದು ಆಗ್ರಹಿಸಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ನಗರದ ಗಾಂಧಿ ಪ್ರತಿಮೆ ಬಳಿ ನ. 20ರಂದು ಎಲ್ಲ ಬಿಜೆಪಿ ಶಾಸಕರು ಹಾಗೂ ಮುಖಂಡರು ಧರಣಿ ನಡೆಸಲಿದ್ದಾರೆಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಉಪಸ್ಥಿತರಿದ್ದರು.
ಪ್ರಹ್ಲಾದ ಜೋಶಿ ಸುದ್ದಿಗೋಷ್ಠಿ:
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ ಜೋಶಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಹಸೀಲ್ದಾರರು ಸಲ್ಲಿಸಿರುವ ವರದಿಯಲ್ಲಿ ದಿನೇಶ ಗುಂಡೂರಾವ್ ಅವರ ಹೆಸರಿರುವುದು ಸಷ್ಟವಾಗಿದೆ. ಆದ್ದರಿಂದ ಅವರು ತಕ್ಷಣ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.












Click it and Unblock the Notifications