ಬಿಟ್‌ಕಾಯಿನ್ ಹ್ಯಾಕಿಂಗ್‌ನಲ್ಲಿ ಶ್ರೀಕಿ ಪಾತ್ರವಿದೆ ಎಂದ ಸೈಬರ್ ಐಡಿ ಟೆಕ್ ಲ್ಯಾಬ್!
ಬೆಂಗಳೂರು, ನ. 17: ಬಿಟ್‌ಕಾಯಿನ್ ಅಕ್ರಮ ವಿಚಾರದಲ್ಲಿ ಹ್ಯಾಕರ್ ಶ್ರೀಕಿ ಪಾತ್ರದ ಬಗ್ಗೆ ಖಾಸಗಿ ಲ್ಯಾಬ್ ಸ್ಫೋಟಕ ವರದಿಕೊಟ್ಟಿದೆ . ವರದಿಯ ವಿವರ ಇಲ್ಲಿದೆ.
ಬಿಟ್ ಕಾಯಿನ್ ಹಗರಣ ರಾಜ್ಯದ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಹ್ಯಾಕರ್ ಶ್ರೀಕಿಯ ಲ್ಯಾಪ್‌ಟಾಪ್ ಅನ್ವೇಷಣೆ ಮಾಡಿದ ಖಾಸಗಿ ಸೈಬರ್ ಲ್ಯಾಬ್ ಈ ಕುರಿತು ಪೊಲೀಸರಿಗೆ ಸ್ಫೋಟಕ ವರದಿಯನ್ನು ಸಲ್ಲಿಸಿದೆ.
ಹ್ಯಾಕರ್ ಶ್ರೀಕೃಷ್ಣ ಲ್ಯಾಪ್‌ಟಾಪ್‌ನಲ್ಲಿ ಲಕ್ಷಾಂತರ ಪ್ರೆವೈಟ್ ಕೀಗಳು ಇದೆಯಂತೆ. ಬರೋಬ್ಬರಿ 76 ಲಕ್ಷ ಖಾಸಗಿ ಕೀ ಹಾಗೂ ಇ ವ್ಯಾಲೆಟ್ ವಿಳಾಸ ಪತ್ತೆಯಾಗಿವೆ. ಖಾಸಗಿ ಕೀ ಹಾಗೂ ವ್ಯಾಲೆಟ್ ಪತ್ತೆಯಾಗಿರುವುದರಿಂದ ಬಿಟ್‌ಕಾಯಿನ್ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಬಿಟ್‌ಕಾಯಿನ್ ಕೋರ್ ಸಾಫ್ಟ್‌ವೇರ್ ಮ್ಯಾನುಪ್ಲೇಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕ್ಲೌಡ್ ಅಕೌಂಟ್‌ನಲ್ಲಿ 27 ಇ ವ್ಯಾಲೆಟ್ ಹೊಂದಿರುವ ಸ್ಫೋಟಕ ಅಂಶ ಬಯಲಾಗಿದೆ. ಅಷ್ಟೂ ವ್ಯಾಲೆಟ್‌ಗಳಲ್ಲಿ ಖಾಸಗಿ ಕೀ, ವ್ಯಾಲೆಟ್ ಅಡ್ರೆಸ್ ತುಂಬಿಸಲಾಗಿದೆ ಎಂದು ಸೈಬರ್ ಐಡಿ ಟೆಕ್ನಾಲಜಿ ಪ್ರೆ. ಲಿಮಿಟೆಡ್ ತನ್ನ ಅನ್ವೇಷಣಾ ವರದಿಯನ್ನು ಪೊಲೀಸರಿಗೆ ಸಲ್ಲಿಸಿದೆ.
ಹ್ಯಾಕರ್‌ಗೆ ಜೀವ ಭಯದ ಪ್ರಶ್ನೆ:
ರಾಜಕಾರಣಿಗಳ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಕುರಿತು ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಒಂದು ಸ್ಪಷ್ಟೀಕರಣ ಪ್ರಕಟಣೆ ನೀಡಿರುವ ಪೊಲೀಸ್ ಆಯುಕ್ತರು ಪೊಲೀಸರ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಮುಜಾಯಿಷಿ ವರದಿಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ರೌಡಿ ಕರ್ಚಿಪ್ ಕಾಲಿಗೆ ಸಿಸಿಬಿ ಗುಂಡು :
ವ್ಯಕ್ತಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹೊಡೆದಿದ್ದಾರೆ. ರೌಡಿ ಶೀಟರ್ ಕರ್ಚೀಪ್ ಅಲಿಯಾಸ್ ಪಳನಿ ಗುಂಡೇಟು ತಿಂದಿದ್ದಾನೆ. ಬೆಳ್ಳಂದೂರಿನಲ್ಲಿ ಮುನ್ನ ಕುಮಾರ್ ಎಂಬಾತನನ್ನು ಪಳನಿ ಕೊಲೆ ಮಾಡಿದ್ದ. ದಾರಿ ಬಿಡುವ ಕ್ಷುಲ್ಲಕ ವಿಚಾರಕ್ಕಾಗಿ ಜಗಳ ತೆಗೆದು ಕೊಲೆ ಮಾಡಿದ್ದ. ಮಾತ್ರವಲ್ಲ, ಕತ್ತು ಸೀಳಿ ವಿಕೃತವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಪರಾಧ ಕೃತ್ಯ ಎಸಗಿದ್ದ ಪಳನಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿ ರೂಪಾಂತರಗೊಂಡಿದ್ದ. ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಪಳನಿಗಾಗಿ ಬೆಳ್ಳಂದೂರು ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದರು. ಪಳನಿ ಅಶೋಕ್ ನಗರ ಠಾಣಾ ವ್ಯಾಪ್ತಿಯ ಸ್ಮಶಾನದಲ್ಲಿ ಇರುವ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಎಸಿಪಿ ಪರಮೇಶ್ ಮತ್ತು ಇನ್‌ಸ್ಪೆಕ್ಟರ್ ಹರೀಶ್ ಆರೋಪಿಯ ಬಂಧನಕ್ಕೆ ತೆರಳಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಹರೀಶ್ ಮೇಲೆ ಪಳನಿ ಡ್ರಾಗರ್ ನಿಂದ ಹಲ್ಲೆ ಮಾಡಲು ಯತ್ನಿಸಿದ್ದು, ಎಸಿಪಿ ಪರಮೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಶರಣಾಗುವಂತೆ ಸೂಚನೆ ನೀಡಿದರೂ ಕೇಳಿಲ್ಲ. ಈ ವೇಳೆ ಎಸಿಪಿ ಪರಮೇಶ್ ಹೊಡೆದ ಗುಂಡು ಪಳನಿಯ ಕಾಲಿಗೆ ಬಿದ್ದು ಕುಸಿದು ಬಿದ್ದಿದ್ದಾನೆ. ಅರೋಪಿ ರೌಡಿ ಶಿಟರ್‌ನನ್ನು ಸಮೀಪದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯಾಳು ಇನ್ಸ್ಪೆಕ್ಟರ್ ಹರೀಶ್ ಸಹ ಚಿಕಿತ್ಸೆ ಪಡೆದಿದ್ದಾರೆ.
ನಿನ್ನೆಯಷ್ಟೇ ಹೆಣ್ಣೂರು ಪೊಲೀಸರು ಪಾತಕಿಯೊಬ್ಬನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಗಾರ್ಮೆಂಟ್ಸ್ ಉದ್ಯಮಿಯನ್ನು ಕೊಲೆ ಮಾಡಿದ್ದ ಆರು ಹಂತಕರ ಪೈಕಿ ಒರ್ವ ಮಹಜರಿಗೆ ಕರೆದೊಯ್ಯುವಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಹಲ್ಲೆ ಮಾಡಿದ್ದ. ಈ ವೇಳೆ ಗುಂಡು ಹಾರಿಸಿದ್ದರು. ಇದೀಗ ಸಿಸಿಬಿ ಪೊಲೀಸರು ಗುಂಡು ಹಾರಿಸಿ ರೌಡಿಯನ್ನು ಬಂಧಿಸಿದ್ದಾರೆ.