ಬೆಂಗಳೂರು : ರಸ್ತೆ ಅಪಘಾತ ಕಾರ್ಪೋರೇಟರ್ ಪುತ್ರ ಸಾವು
ಬೆಂಗಳೂರು, ಸೆ.27 : ನಾಯಂಡಹಳ್ಳಿ ಜಂಕ್ಷನ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ತೇಜಸ್ ಮೃತಪಟ್ಟಿದ್ದಾರೆ. ಮೃತ ತೇಜಸ್ ಮಾರುತಿ ಮಂದಿರ ವಾರ್ಡ್ ಬಿಬಿಎಂಪಿ ಸದಸ್ಯ ವಾಗೀಶ್ ಅವರ ಪುತ್ರ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಾಲೇಜಿನಿಂದ, ಮಾರುತಿ ಮಂದಿರದ ಬಳಿ ಇರುವ ತಮ್ಮ ಮನೆಗೆ ಬೈಕ್ ನಲ್ಲಿ ತೇಜಸ್ ಬರುವಾಗ ಎನ್ಎಚ್ ವಿಟಿಎಸ್ ಶಾಲೆಗೆ ಸೇರಿದ ಬಸ್ ನಾಯಂಡಹಳ್ಳಿ ಜಂಕ್ಷನ್ ಬಳಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸದ್ಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಶಾಲಾ ವಾಹನ ಚಾಲಕನನ್ನು ಬಂಧಿಸಿದ್ದಾರೆ.
ತೇಜಸ್ ಮಹಾವೀರ್ ಜೈನ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಪ್ರತಿದಿನ ಅವರು ಯಮಹಾ ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. (ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್)
ಸೋಮಣ್ಣ ಭೇಟಿ : ತೇಜಸ್ ಶವವಿರುವ ವಿಕ್ಟೋರಿಯಾ ಆಸ್ಪತ್ರೆಗೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದ್ದರು. ತೇಜಸ್ ತಂದೆ ಬಿಬಿಎಂಪಿ ಸದಸ್ಯ ವಾಗೀಶ್ ಅವರಿಗೆ ಸಾಂತ್ವನ ಹೇಳಿದರು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ನಾಯಂಡಹಳ್ಳಿಗೆ ಇನ್ನೆಷ್ಟು ಬಲಿ : ನಾಯಂಡಹಳ್ಳಿ ಜಂಕ್ಷನ್ ನಲ್ಲಿ ಮೆಟ್ರೋ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಬನಶಂಕರಿ, ಸ್ಯಾಟಲೈಟ್ ಬಸ್ ನಿಲ್ದಾಣ, ನಾಗರಬಾವಿ ಮತ್ತು ಮೈಸೂರು ರಸ್ತೆಯಿಂದ ಕಡೆಯಿಂದ ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ.
ಸರಿಯಾದ ಟ್ರಾಫಿಕ್ ನಿರ್ವಹಣೆಯಿಲ್ಲದೆ ಜಂಕ್ಷನ್ ನಲ್ಲಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಅ.7ರಂದು ಸಹ ಜಂಕ್ಷನ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. (ನಾಯಂಡಹಳ್ಳಿಯಲ್ಲಿ ಭೀಕರ ಅಪಘಾತ 4 ಸಾವು)












Click it and Unblock the Notifications