Bengaluru Airport City: ಶುದ್ಧ ಇಂಧನ ಪರಿಹಾರಕ್ಕಾಗಿ ಗೈಲ್ ಜತೆ BIAL ಮಹತ್ವದ ಒಪ್ಪಂದ
ಬೆಂಗಳೂರು, ಸೆಪ್ಟಂಬರ್ 24: ಬೆಂಗಳೂರು ವಿಮಾನ ನಿಲ್ದಾಣ ನಗರ ನಿಯಮಿತ (BIAL) ಜಿಎಐಎಲ್ (ಇಂಡಿಯಾ) ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಎಐಎಲ್ ಗ್ಯಾಸ್ ಲಿಮಿಟೆಡ್ ಜೊತೆಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಮೂಲಕ ವಿಮಾನ ನಿಲ್ದಾಣ ನಗರದಲ್ಲಿ ನಗರ ಅನಿಲ ವಿತರಣಾ (CGD) ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಸ್ವಚ್ಛ ಮತ್ತು ಹಸಿರು ಇಂಧನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ.
ಮುಂಗಡ ಯೋಜನೆ ಅಡಿ CNG ನಿಲ್ದಾಣ, ಪೈಪ್ಡ್ ನೈಸರ್ಗಿಕ ಅನಿಲ (PNG) ಸ್ಥಾಪನೆ ಹಾಗೂ ಇತರ ಶುದ್ಧ ಇಂಧನ ಪರಿಹಾರಗಳು ನಿರ್ಮಿಸಲಾಗುತ್ತವೆ. ಇಂಧನ ಸೇವೆಗಳ ಜೊತೆ ಸಾರ್ವಜನಿಕರಿಗೆ ಇಂಧನೇತರ ಚಿಲ್ಲರೆ ಮತ್ತು ವಿವಿಧ ಅನುಕೂಲಕರ ಸೌಲಭ್ಯಗಳನ್ನು ಕೂಡ ಒದಗಿಸಲಾಗುವುದು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ಟ್ಯಾಕ್ಸಿ, ಬಸ್‌ಗಳು, ಲಾಜಿಸ್ಟಿಕ್ಸ್ ಫ್ಲೀಟ್ ಮತ್ತು ಕೊನೆಯ ಮೈಲಿ ಸಂಪರ್ಕ ವಾಹನಗಳಿಗೆ ಸಿಎನ್‌ಜಿ ಮೂಲಸೌಕರ್ಯ ಸುಗಮವಾಗಲಿದೆ. ಈ ಯೋಜನೆಯ ಮೂಲಕ ವಿಮಾನ ನಿಲ್ದಾಣ ನಗರವನ್ನು ನಗರ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಸುಸ್ಥಿರ ಇಂಧನ ಪರಿಹಾರಗಳನ್ನು ಸಂಯೋಜಿಸುವ ಮಾದರಿ ತಾಣವನ್ನಾಗಿ ರೂಪಿಸಲಾಗುವುದು. ಜೊತೆಗೆ ಇದು ಅಂತಾರಾಷ್ಟ್ರೀಯ ಸುಸ್ಥಿರತೆಯ ಮಾನದಂಡಗಳಿಗೆ ಅನುಗುಣವಾಗಿ ಸ್ಮಾರ್ಟ್ ಹಾಗೂ ಹಸಿರು ವ್ಯಾಪಾರ ತಾಣವಾಗಿ ಬದಲಾಗಲಿದೆ ಎಂದು ಉಭಯ ಕಂಪನಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
ಶುದ್ಧ ಇಂಧನ ಪರಿವರ್ತನೆಗೆ ಮಹತ್ವದ ಹೆಜ್ಜೆ
ಈ ಕುರಿತು ಪ್ರತಿಕ್ರಿಯಿಸಿದ BIAL ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ರಾವ್ ಮುನುಕುಟ್ಲ ಅವರು, ಜಿಎಐಎಲ್ ಗ್ಯಾಸ್‌ನ ಮುಂಬರುವ ನಗರ ಅನಿಲ ವಿತರಣಾ ಸೌಲಭ್ಯವು ಭಾರತದ ಶುದ್ಧ ಇಂಧನ ಪರಿವರ್ತನೆಗೆ ಮಹತ್ವದ ಹೆಜ್ಜೆಯಾಗಿದೆ. ಈಗಾಗಲೇ IGBC ಪ್ಲಾಟಿನಂ ಶ್ರೇಯಾಂಕ ಪಡೆದಿರುವ ನಮ್ಮ ವಿಮಾನ ನಿಲ್ದಾಣ ನಗರದಲ್ಲಿ ಈ ಯೋಜನೆ ನಮ್ಮನ್ನು ಸುಸ್ಥಿರ ನಗರ ನವೀನತೆಯಲ್ಲಿ ನಾಯಕತ್ವದ ಹಾದಿಯಲ್ಲಿ ಮುನ್ನಡೆಸುತ್ತದೆ. ಮೂಲಸೌಕರ್ಯ ನಿರ್ಮಾಣದ ಜೊತೆಗೆ ಹಸಿರು ಅಭಿವೃದ್ಧಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದ್ದೇವೆ ಎಂದರು.

ಜಿಎಐಎಲ್ ಗ್ಯಾಸ್ ಲಿಮಿಟೆಡ್‌ನ ಸಿಇಒ ಗೌತಮ್ ಚಕ್ರವರ್ತಿ ಅವರು, "ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಲು ನಾವು ಸದಾ ಬದ್ಧರಾಗಿದ್ದೇವೆ. ಬೆಂಗಳೂರು ವಿಮಾನ ನಿಲ್ದಾಣ ನಗರದಲ್ಲಿ ನಿರ್ಮಿಸಲಿರುವ ಸಿಎನ್‌ಜಿ ಸ್ಟೇಷನ್ ಸಾವಿರಾರು ವಾಹನಗಳಿಗೆ ಪ್ರಯೋಜನಕಾರಿಯಾಗಿದೆ. ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಸಿಎನ್‌ಜಿ ತುಂಬುವ ಅನುಕೂಲ ದೊರೆಯಲಿದೆ. ನಮ್ಮ ಗುರಿ ಬೆಂಗಳೂರನ್ನು ಚ್ಛ ಮತ್ತು ಹಸಿರು ನಗರವನ್ನಾಗಿ ರೂಪಿಸಲಾಗುವುದು' ಎಂದು ತಿಳಿಸಿದರು.
ಈ ಯೋಜನೆಗಾಗಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಗೈಲ್ ಗ್ಯಾಸ್‌ಗೆ ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಯೋಜನೆ ಕಾರ್ಯಗತಗೊಳಿಸಲು ಅಧಿಕಾರ ನೀಡಿದೆ. ಕಂಪನಿ ಈಗಾಗಲೇ ಮನೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ PNG ಹಾಗೂ ಸಿಎನ್‌ಜಿ ಪೂರೈಕೆ ಮಾಡುತ್ತಿದೆ ಎಂದು ಅವರು ವಿವರಿಸಿದರು.
ಈ ಸಹಯೋಗದೊಂದಿಗೆ BIAL ಮತ್ತು GAIL ಗ್ಯಾಸ್ ಭಾರತದಲ್ಲಿ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುವುದರ ಜೊತೆಗೆ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಮುದಾಯಗಳಿಗೆ ಸುಸ್ಥಿರ ಚಲನಶೀಲ ಪರಿಸರ ವ್ಯವಸ್ಥೆ ನಿರ್ಮಿಸಲು ಬದ್ಧತೆ ವ್ಯಕ್ತಪಡಿಸಿವೆ ಎಂದರು.












Click it and Unblock the Notifications