ಐಪಿಎಸ್ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿದ ಭಾಸ್ಕರ್ ರಾವ್; ರಾಜಕೀಯ ಎಂಟ್ರಿ?
ಬೆಂಗಳೂರು, ಏಪ್ರಿಲ್ 2: ಭಾರತೀಯ ಪೊಲೀಸ್ ಸೇವೆಗೆ (ಐಪಿಎಸ್) ಸೇವೆಗೆ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಪ್ರಸ್ತುತ ಇವರು ರೈಲ್ವೇ ಇಲಾಖೆಯ ಎಡಿಜಿಪಿಯಾಗಿದ್ದರು.
1954ರಂದು ಜನಿಸಿದ ಭಾಸ್ಕರ್ ರಾವ್, 2019-20ರ ಅವಧಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಆಂತರಿಕ ಭದ್ರತಾ ವಿಭಾಗದಲ್ಲಿ ಕೂಡ ಕೆಲಸ ನಿರ್ವಹಿಸಿದ್ದರು. ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ ಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಅವಕಾಶ ನೀಡಿತ್ತು.

3 ತಿಂಗಳೊಳಗೆ ಗೃಹ ಸಚಿವಾಲಯ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಬೇಕು. 6 ತಿಂಗಳುಗಳೇ ಕಳೆದರೂ ಗೃಹ ಸಚಿವಾಲಯದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2)ನಡಿ ಸೇವೆಗೆ ಗುಡ್ ಬೈ ಹೇಳಿದ್ದಾರೆ.
ಎಐಎಸ್ ಆಕ್ಟ್ 16(2) ಪ್ರಕಾರ ಸಂಬಂಧಿಸಿದ ಅಧಿಕಾರಿ 50 ವರ್ಷ ವಯಸ್ಸು ದಾಟಿರಬೇಕು. 20 ವರ್ಷ ಸೇವೆ ಪೂರ್ಣಗೊಳಿಸಿರಬೇಕು. ನಿವೃತ್ತಿಗೆ ಮನವಿ ಸಲ್ಲಿಸುವಾಗ ಅಮಾನತ್ತಿನಲ್ಲಿರಬಾರದು. ಎಐಎಸ್ ಆಕ್ಟ್ 16(2)ನಡಿ ನಿವೃತ್ತಿಗೆ ಭಾಸ್ಕರ್ ರಾವ್ ಅರ್ಹರಿರುವ ಕಾರಣ ಅಧಿಕೃತವಾಗಿ ಸೇವೆಗೆ ರಾಜೀನಾಮೆ ನಿಡಿದ್ದಾರೆ.
ಸ್ವಯಂ ನಿವೃತ್ತಿ ಪಡೆದಿರುವ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಮುಂಬರುವ ದಿನಗಳಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆಂದು ಎಂಬ ಸುದ್ದಿಗಳು ಕೇಳಿಬರುತ್ತಿವೆ.












Click it and Unblock the Notifications