ಕನಕಪುರ ಕಾದಾಟ: ‘ಬಂಡೆ’ ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ ವರ್ಕೌಟ್ ಆಗುತ್ತಾ?
ಬೆಂಗಳೂರು: ಕನಕಪುರ ಕ್ಷೇತ್ರದ ಚುನಾವಣೆ ಕಾವು ಹೇಗಿದೆ ಅಂದ್ರೆ, ಅತ್ತ ಇಡೀ ಕರ್ನಾಟಕದ ಚುನಾವಣೆಯೇ ಒಂದು ಲೆಕ್ಕವಾದರೆ, ಇನ್ನೊಂದ್ಕಡೆ ಹೈವೋಲ್ಟೇಜ್ ಕನಕಪುರದ್ದೇ ಮತ್ತೊಂದು ಲೆಕ್ಕ. ಅಷ್ಟರಮಟ್ಟಿಗೆ ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಕನಕಪುರ ಕ್ಷೇತ್ರದಲ್ಲಿ 'ಬಂಡೆ' ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ ವರ್ಕೌಟ್ ಆಗುತ್ತಾ? ತಿಳಿಯೋಣ ಬನ್ನಿ.
ಹೌದು ಸತತ 7 ಗೆಲುವು ಕಂಡು ಕನಕಪುರ ಕ್ಷೇತ್ರದಲ್ಲಿ 'ಬಂಡೆ' ರೀತಿ ಬೀಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಈ ಬಾರಿ ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದೆ. ಇದೇ ಕಾರಣಕ್ಕೆ ಸಚಿವ ಆರ್.ಅಶೋಕ್ ಅವರನ್ನ ಇಲ್ಲಿ ಕಣಕ್ಕೆ ಇಳಿಸಿ ಹೊಸ ಆಟ ಶುರುಮಾಡಿದೆ. ಹಾಗಾದರೆ ಆರ್.ಅಶೋಕ್ 'ಬಂಡೆ' ವಿರುದ್ಧ ಡೈನಮೈಟ್‌ನಂತೆ ಸಿಡಿಯುತ್ತಾರೋ ಅಥವಾ ಡಿ.ಕೆ. ಸಹೋದರರ ಅಬ್ಬರದಲ್ಲಿ ಠುಸ್ ಪಟಾಕಿ ಆಗ್ತಾರಾ? ಎಂಬ ಕುತೂಹಲ ದುಪ್ಪಟ್ಟಾಗಿದೆ. ಚುನಾವಣೆಗೆ ಇನ್ನೇನು 4 ದಿನ ಬಾಕಿ ಇರುವಾಗ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ.

20 ವರ್ಷದಿಂದ ಕಾಂಗ್ರೆಸ್ ಭದ್ರಕೋಟೆ
ಕನಕಪುರ ಎಂದರೆ ಒಂದೋ ಜೆಡಿಎಸ್ ಅಥವಾ ಮತ್ತೊಂದು ಕಾಂಗ್ರೆಸ್ ಎಂಬ ಮಟ್ಟಿಗೆ ಜನ ಅಲ್ಲಿ ಫಿಕ್ಸ್ ಆಗಿದ್ಧಾರೆ. 2 ದಶಕ ಅಂದ್ರೆ ಕಳೆದ 20 ವರ್ಷದಿಂದ ಕಾಂಗ್ರೆಸ್ ಭದ್ರಕೋಟೆ ಆಗಿರುವ ಕನಕಪುರದಲ್ಲಿ ಬಿಜೆಪಿ ಪ್ರಯೋಗಕ್ಕೆ ಕೈಹಾಕಿದೆ. ಹೀಗಾಗಿ ದಿಲ್ಲಿಯಿಂದ ಹಳ್ಳಿತನಕ ಬಿಜೆಪಿ ವರಿಷ್ಠರು ಕನಕಪುರ ಕೋಟೆ ಗೆಲ್ಲಲು ಸ್ಕೆಚ್ ಹಾಕಿದ್ದಾರೆ ಅದ್ರಲ್ಲೂ ಬಿ.ಎಲ್. ಸಂತೋಷ್ ಕನಕಪುರದಲ್ಲಿ ಗೆದ್ದೇ ಗೆಲ್ಲಬೇಕು ಅಂತಾ ಟಾಸ್ಕ್ ಕೊಟ್ಟಿದ್ದಾರೆ. ಆದರೆ ಹಿಂದೆ ಇಲ್ಲಿ ಬಿಜೆಪಿ ಸ್ಪರ್ಧೆ ಹೆಸರಿಗೆ ಸೀಮಿತವಾಗಿತ್ತು. ಒಮ್ಮೆಯೂ ಠೇವಣಿ ಉಳಿದಿಲ್ಲ, ಈಗಲಾದರೂ ಟ್ರೆಂಡ್ ಚೇಂಜ್ ಆಗುತ್ತಾ?
ಯಾವ ಸಮುದಾಯ ನಿರ್ಣಾಯಕ?
ಕನಕಪುರ ಕ್ಷೇತ್ರದಲ್ಲಿ ಯಾವ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬ ಲೆಕ್ಕಾಚರಕ್ಕೆ ಬಂದ್ರೆ, ಒಂದೇ ಉತ್ತರ ಒಕ್ಕಲಿಗ ಮತದಾರರು. ಒಟ್ಟು 2,20,391 ಮತದಾರರನ್ನು ಹೊಂದಿರುವ ಕನಕಪುರ ಕ್ಷೇತ್ರದಲ್ಲಿ 1,09, 876 ಪುರುಷರು, 1,10,500 ಮಹಿಳಾ ಮತದಾರದ್ದರೆ, ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರ 99,567 ವೋಟ್ ಇಲ್ಲಿದೆ. ದಲಿತ ಸಮುದಾಯದ 44 ಸಾವಿರ ಮತಗಳು, ಮುಸ್ಲಿಮರ 22,500, ಲಿಂಗಾಯತರ 18,500 ಮತಗಳು ಇವೆ. ಇನ್ನುಳಿದಂತೆ ಕುರುಬರು 5,600, ತಿಗಳರು 10,500, ಕ್ರೈಸ್ತರು 2,507, ಬೆಸ್ತರು 6000 ಹಾಗೂ ಇತರೆ ಸಮುದಾಯದ 9400 ಮತದಾರರಿದ್ದಾರೆ.
ಕನಕಪುರದಲ್ಲಿ ಒಕ್ಕಲಿಗರ ವೋಟ್ ಯಾರಿಗೆ?
ಈ ಲೆಕ್ಕಾಚಾರದಲ್ಲಿ ನೋಡುವುದಾದರೆ ಒಕ್ಕಲಿಗರ ಮತವಿಲ್ಲದೆ ಕನಕಪುರ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ಡಿಸೈಡ್ ಮಾಡಲು ಆಗಲ್ಲ. ಸುಮಾರು 1 ಲಕ್ಷದಷ್ಟು ಒಕ್ಕಲಿಗರ ಮತಗಳು ಇರುವ ಕಾರಣ, ಇರುವ 2 ಲಕ್ಷ 20 ಸಾವಿರ ವೋಟ್ ಪೈಕಿ ಒಕ್ಕಲಿಗರ ಮತಗಳೇ ಗೇಮ್ ಡಿಸೈಡರ್. ಆದರೆ ಕಾಂಗ್ರೆಸ್, ಬಿಜೆಪಿ ಒಕ್ಕಲಿಗ ಅಭ್ಯರ್ಥಿಯನ್ನೇ ಕಣದಲ್ಲಿ ಇಳಿಸಿ ಹೊಸ ಗೇಮ್ ಶುರು ಮಾಡಿದೆ. ಮತ್ತೊಂದ್ಕಡೆ ಬಿಜೆಪಿ ನಾಯಕರ ವಿರುದ್ಧ ಡಿಕೆ ಬ್ರದರ್ಸ್ ಬಂಡೆಯಂತೆ ತೊಡೆತಟ್ಟಿ ನಿಂತಿದ್ದಾರೆ. ಹೀಗಾಗಿ ಕನಕಪುರ ರಣಕಣ ರಂಗೇರಿದೆ.
ಆರ್.ಅಶೋಕ್ ಪರ ಭರ್ಜರಿ ಪ್ರಚಾರ!
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಸವದಿ ಹಾಗೂ ಜಗದೀಶ್ ಶೆಟ್ಟರ್ ಸೋಲಿಗೆ ಬಿಜೆಪಿ ಶಪಥ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ತೀವ್ರ ಮುತುವರ್ಜಿ ವಹಿಸಿ, ಕನಕಪುರ ಸೇರಿ ಉಳಿದವರ ಕ್ಷೇತ್ರದಲ್ಲಿ ಸಂಘಟನೆ ರೂಪಿಸಿದ್ದಾರೆ ಕಮಲ ಪಾಳಯದ ನಾಯಕರು. ಇನ್ನೊಂದೆಡೆ 2 ಕಡೆ ಚುನಾವಣೆಗೆ ನಿಂತಿದ್ದರೂ ಆರ್.ಅಶೋಕ್ ಗಮನ ಹಾಲಿ ಕ್ಷೇತ್ರ ಪದ್ಮನಾಭ ನಗರಕ್ಕಿಂತ ಹೆಚ್ಚಾಗಿ ಕನಕಪುರ ಕ್ಷೇತ್ರದ ಕಡೆ ನೆಟ್ಟಿದೆ. ಕನಕಪುರ ಕ್ಷೇತ್ರದಲ್ಲಿ ಅಲರ್ಟ್ ಆಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸ್ತಿದ್ದಾರೆ.
ಒಟ್ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಏನೇ ಇದ್ದರೂ ಮತದಾರ ಪ್ರಭು ಯಾವ ನಿಲುವು ಕೈಗೊಳ್ಳಲಿದ್ದಾನೆ ಎಂಬ ಅಂಶದ ಮೇಲೆ ಎಲ್ಲಾ ನಿರ್ಧಾರ ಆಗಲಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಅಂದೇ ಕನಕಪುರ ಕ್ಷೇತ್ರದಲ್ಲಿ ಗೆಲುವು ಯಾರ ಪಾಲಿಗೆ ಎಂಬುದು ಕೂಡ ಡಿಸೈಡ್ ಆಗಲಿದೆ. ತಂತ್ರ, ರಣತಂತ್ರ, ಭದ್ರಕೋಟೆ ಎಲ್ಲವೂ ಮತಪೆಟ್ಟಿಗೆಯಲ್ಲಿ ಮೇ 10ರಂದು ಭದ್ರವಾಗಲಿದೆ.












Click it and Unblock the Notifications