ಇನ್ಮುಂದೆ ಗಾಳಿ, ಮಳೆ ಬಂದರೂ ಬೆಂಗಳೂರಲ್ಲಿ ವಿದ್ಯುತ್ ಸಮಸ್ಯೆಯಾಗಲ್ಲ
ಬೆಂಗಳೂರು, ಜೂನ್ 13: ಒಂದು ಸಣ್ಣ ಗಾಳಿ, ಮಳೆ ಬಂದರೂ ಸಾಕು ಬೆಂಗಳೂರಲ್ಲಿ ಕತ್ತಲು ಆವರಿಸಿಕೊಂಡುಬಿಡುತ್ತದೆ. ಹಾಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೆಸ್ಕಾಂ ಮುಂದಾಗಿದೆ.
ಸದ್ಯ ನಗರದ 29 ಕಡೆಗಳಲ್ಲಿ ನೆಲದೊಳಗಿಂದಲೇ ವಿದ್ಯುತ್ ಸಂಪರ್ಕ ನೀಡಲು ಮುಂದಾಗಿದೆ. ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ಕಂಬದ ಬದಲು ನೆಲದೊಳಗೆ ವಿದ್ಯುತ್ ತಂತಿ ಇರಿಸಲಾಗುತ್ತದೆ. ಹಾಗಾಗಿ ಇನ್ನುಮುಂದೆ ಮಳೆ, ಗಾಳಿ ಬಂದರೂ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಅಡಚಣೆಯಾಗುವುದಿಲ್ಲ.
ಬೆಸ್ಕಾಂ 6,900 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಯನ್ನು ಭೂಮಿಯೊಳಗೆ ಕೊಂಡೊಯ್ಯುವ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿದೆ. ಜನವರಿಯಿಂದ ಜೂನ್ 10ರವರೆಗೆ ಬೆಂಗಳೂರಲ್ಲಿ ಮರಗಳು, ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ 2,633 ಪ್ರಕರಗಳು ದಾಖಲಾಗಿದ್ದವು. 2135 ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು.

ಎಚ್‌ಎಸ್‌ಆರ್ ಲೇಔಟ್, ಪೀಣ್ಯ, ಇಂದಿರಾನಗರ, ದೊಮ್ಮಲೂರು, ಕೋರಮಂಗಲ, ಮತ್ತಿಕೆರೆ, ಜಯನಗರ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್ ನಲ್ಲಿ ಅತಿ ಹೆಚ್ಚು ವಿದ್ಯುತ್ ಸಮಸ್ಯೆ ಉಂಟಾಗಿತ್ತು.
ಅಂಡರ್‌ಗ್ರೌಂಡ್ ಕೇಬಲಿಂಗ್ ಯೋಜನೆಯಲ್ಲಿ 11 ಕೆವಿ ಹೈ-ಟೆನ್ಷನ್ ವಿದ್ಯುತ್ ತಂತಿಗಳನ್ನು ಬಳಕೆ ಮಾಡಲಾಗುತ್ತದೆ. ಮೊದಲ ಎರಡು ಹಂತಗಳನ್ನು 18 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುತ್ತದೆ. 29 ಸ್ಥಳಗಳಲ್ಲಿ ಒಟ್ಟು 1,839 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮೂರು ಹಾಗೂ ನಾಲ್ಕನೇ ಹಂತದಲ್ಲಿ 2,400 ಕೋಟಿ ವೆಚ್ಚವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಷ್ಟೇ ಅಲ್ಲ ಕೆಳಗೆ ಬಿದ್ದಿರುವ ವಿದ್ಯುತ್ ತಂತಿ ತಗುಲಿ ಮೃತಪಡುವವರ ಸಂಖ್ಯೂ ಹೆಚ್ಚುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಮೊದಲ ಹಂತದ ಪ್ರದೇಶಗಳು: ಎಚ್‌ಎಸ್‌ಆರ್ ಲೇಔಟ್, ಅಗರ, ದೊಮ್ಮಲೂರು, ಮಹಾಲಕ್ಷ್ಮೀನಗರ, ಜಯನಗರ, ಪೀಣ್ಯ, ನಂದಿನಿ ಲೇಔಟ್, ರಾಜಾಜಿನಗರ, ಮಲ್ಲೇಶ್ವರಂ, ಸದಾಶಿವನಗರ, ಮತ್ತಿಕೆರೆ, ಜೆಪಿನಗರ, ಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ನಾಗರಭಾವಿ, ಶಾಂತಿನಗರ, ಬಿಟಿಎಂ ಲೇಔಟ್, ಆರ್‌ಆರ್ ನಗರ, ಚಾಮರಾಜಪೇಟೆ, ಹನುಮಂತನಗರ, ಫ್ರೇಜರ್ ಟೌನ್, ಶಿವಾಜಿನಗರ, ಜಯಮಹಲ್, ರಾಮಮೂರ್ತಿನಗರ, ಸಹಕಾರನಗರ, ಜಕ್ಕೂರಿನಲ್ಲಿ ಕಾಮಗಾರಿ ನಡೆಯಲಿದೆ.












Click it and Unblock the Notifications