ವಿದ್ಯುತ್ ಸಮಸ್ಯೆ, ಬೆಸ್ಕಾಂಗೆ ಒಂದೇ ದಿನ ಬರೋಬ್ಬರಿ 11,000 ದೂರುಗಳು
ಬೆಂಗಳೂರು, ಮೇ 14: ವಿದ್ಯುತ್ ಸಮಸ್ಯೆ ಕುರಿತು ಬೆಸ್ಕಾಂಗೆ ಒಂದೇ ದಿನದಲ್ಲಿ 11 ಸಾವಿರ ದೂರುಗಳು ಬಂದಿವೆ.
ಬೆಂಗಳೂರು ಹಳ್ಳಿಯಂತಾಗಿದೆ. ಒಂದು ಸಣ್ಣ ಮಳೆ ಬಂದರೂ ಸಾಕು ಪವರ್ ಕಟ್, ರಸ್ತೆಯಿಂದ ಮಳೆಯ ನೀರೆಲ್ಲಾ ಆವಿಯಾಗಿ ಹೋದರೂ ಕೂಡ ಕರೆಂಟ್ ಬರುವುದು ಮಾತ್ರ ಕಷ್ಟ, ಹತ್ತಾರು ಬಾರಿ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ ಕೊನೆಗೆ ಮೂರ್ನಾಲ್ಕು ಗಂಟೆಗಳ ಬಳಿಕವಷ್ಟೇ ಕರೆಂಟ್ ಬರುತ್ತಿದೆ.
ಸೋಮವಾರ ನಗರದಲ್ಲಿ ಸುರಿದ ಮಳೆಯಿಂದಲೂ ಇದೇ ರೀತಿಯ ತೊಂದರೆಯಾಗಿದೆ. ಅದಕ್ಕೂ ಮೊದಲು ಭಾನುವಾರ ಒಂದೇ ದಿನದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಬೆಸ್ಕಾಂ 11,180 ದೂರುಗಳು ಬಂದಿದ್ದವು.

ಜಯನಗರ, ಶಾಂತಿನಗರ, ಎಸ್‌ಆರ್‌ನಗರ, ವಿಲ್ಸನ್ ಗಾರ್ಡನ್, ಎಸ್‌ಜಿ ಪಾಳ್ಯ, ಬಿಟಿಎಂ ಲೇಔಟ್, ದೊಮ್ಮಲೂರು, ಮಾರತ್ತಹಳ್ಳಿ, ಆಸ್ಟಿನ್ ಟೌನ್, ಇಂದಿರಾನಗರ, ಭಾರತಿನಗರ, ಕೋರಮಂಗಲ, ಮುರುಗೇಶಪಾಳ್ಯ, ಹೊಸಕೋಟೆ, ರಾಮಮೂರ್ತಿ ನಗರ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು.
ಸೋಮವಾರ ಸುರಿದ ಮಳೆಯಿಂದಾಗಿ ನಗರದ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿತ್ತು. ರಾತ್ರಿ ಹೊತ್ತು ಕರೆಂಟ್ ಇಲ್ಲದೆ ಜನರು ಪರದಾಡುವಂತಾಯಿತು. ವಿದ್ಯುತ್ ಸಮಸ್ಯೆಯಿಂದ ಬೇಗ ಪರಿಹಾರ ನೀಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳು ಭರವಸೆಯೇನೋ ನೀಡಿದ್ದಾರೆ ಆದರೆ ಅದು ಎಷ್ಟರ ಮಟ್ಟಿಗೆ ಸರಿಯಾಗಲಿದೆ ಎಂದು ಕಾದು ನೋಡಬೇಕಿದೆ.












Click it and Unblock the Notifications